Home ಟಾಪ್ ಸುದ್ದಿಗಳು ಕಲುಷಿತ ನೀರು ಕುಡಿದು ಓರ್ವ ಸಾವು, 37 ಮಂದಿ ಅಸ್ವಸ್ಥ

ಕಲುಷಿತ ನೀರು ಕುಡಿದು ಓರ್ವ ಸಾವು, 37 ಮಂದಿ ಅಸ್ವಸ್ಥ

ಸಾಂದರ್ಭಿಕ ಚಿತ್ರ

ಯಾದಗಿರಿ: ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿದ್ದು, 37 ಮಂದಿ ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಟ್‌ಪೇಟ್ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹೊನ್ನಪ್ಪ ಗೌಡ ಎಂದು ಗುರುತಿಸಲಾಗಿದೆ. ಶನಿವಾರದಿಂದ ಇಲ್ಲಿಯವರೆಗೆ ಹೊಟ್‌ಪೇಟೆ ಗ್ರಾಮದಲ್ಲಿ 37 ಪ್ರಕರಣಗಳು ವರದಿಯಾಗಿವೆ.

ಕೆಲ ಪೈಪ್‌ಗಳು ಹಾಳಾಗಿದ್ದರಿಂದ ಮಳೆ ನೀರು, ಚರಂಡಿ ನೀರು ಕುಡಿಯುವ ನೀರನ್ನು ಸೇರಿಕೊಂಡಿದೆ. ಗ್ರಾಮದಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ ಕೂಡ ಹಲವು ತಿಂಗಳಿಂದ ಸ್ವಚ್ಛಗೊಳಿಸಿಲ್ಲ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಹಾಪುರ ತಹಶೀಲ್ದಾರ್ ಮಧುರಾಜ್, ಕಳೆದ ಮೂರು ದಿನಗಳಲ್ಲಿ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ, ಅವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ. ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವ ಸಮಯದಲ್ಲಿ ಆ ಗಾಳಿಯನ್ನು ಉಸಿರಾಡಿದಾಗಲೂ ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಹೊಟ್‌ಪೇಟ್‌ನಲ್ಲಿರುವ ಪಿಎಚ್‌ಸಿ ಉಪ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 31 ಮಂದಿ ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೂ 6 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡ ಮತ್ತು ಆಂಬ್ಯುಲೆನ್ಸ್ ಅನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Join Whatsapp
Exit mobile version