► ಸುಳ್ಳು ಹರಡಲು ಶೆಫಾಲಿ ವೈದ್ಯ ಕೂಡಾ ಸಾಥ್
ಚೆನ್ನೈ : ‘ರಾಜಿ ಹಿಂದೂಸ್ತಾನಿ’ ಎಂಬ ಟ್ವಿಟರ್ ಖಾತೆಯಿಂದ ಎರಡು ಫೋಟೊಗಳು ಪೋಸ್ಟ್ ಆಗಿದ್ದವು. ಆ ಫೋಟೊಗಳೊಂದಿಗೆ ಚೆನ್ನೈ ಪೊಲೀಸ್ ಇನ್ಸ್ ಪೆಕ್ಟರ್ ಅಖಿಲನ್ ಮೇಲೆ ಮೂವರು ಮುಸ್ಲಿಮ್ ಯುವಕರು ಇಲ್ಲಿನ ತಿರುವಲ್ಲಿಕೇನಿಯಲ್ಲಿ ದಾಳಿ ಮಾಡಿದ್ದಾರೆ ಎಂಬ ಬರಹ ಪ್ರಕಟವಾಗಿತ್ತು. ಗಾಂಜಾದ ಮತ್ತಲ್ಲಿದ್ದ ಇವರು ಮಹಿಳೆಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದಾಗ ತಡೆಯಲು ಬಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಎಂದೂ ಬರೆಯಲಾಗಿತ್ತು. ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಟ್ವೀಟ್ ಗಳಿಗೆ ಕುಖ್ಯಾತಿ ಪಡೆದಿರುವ ಬಿಜೆಪಿ ಹಾಗೂ ಸಂಘಪರಿವಾರದ ಪರ ಒಲವುಳ್ಳ ಬರಹಗಾರ್ತಿ ಶೆಫಾಲಿ ವೈದ್ಯ ಕೂಡಾ ಈ ಟ್ವೀಟ್ ಅನ್ನು ಉಲ್ಲೇಖಿಸಿ ರಿಟ್ವೀಟ್ ಮಾಡಿದ್ದರು. ಇದು ವೈರಲ್ ಆಗಿದ್ದು, 2,300ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಈ ಘಟನೆಯನ್ನು ಬೆಂಗಳೂರಿನಲ್ಲಿ ಪ್ರವಾದಿ ಮುಹಮ್ಮದರ ನಿಂದನೆಯ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪಿನಿಂದ ನಡೆದ ಹಿಂಸಾಚಾರದ ಘಟನೆಯ ಜೊತೆ ಹೋಲಿಕೆ ಮಾಡಿ ಶೆಫಾಲಿ ಟ್ವೀಟ್ ಪೋಸ್ಟ್ ಆಗಿತ್ತು. ರಾಜಿ ಹಿಂದೂಸ್ತಾನಿಯ ಟ್ವೀಟ್ ಫೇಸ್ ಬುಕ್ ನಲ್ಲೂ ಪತ್ತೆಯಾಗಿದೆ.
ಆದರೆ, ಈ ವಿಷಯ ನಿಜವೇ ಎಂದು ಪರಿಶೀಲಿಸಲು ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ಮಾಡಿದೆ. ಈ ಫೋಟೊಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಅದು ತಮಿಳುನಾಡು ಪೊಲೀಸರ ಫೇಸ್ ಬುಕ್ ಪೇಜ್ ಗೆ ಕೊಂಡು ಹೋಯಿತು. ತಮಿಳುನಾಡು ಪೊಲೀಸರ ಪೇಜ್ ಒಂದರಲ್ಲಿ ಇದೇ ಫೋಟೊಗಳನ್ನು 2017ರಲ್ಲಿ ಪೋಸ್ಟ್ ಮಾಡಲಾಗಿತ್ತು. ಮರೀನಾ ಬೀಚ್ ನಲ್ಲಿ ಪೊಲೀಸ್ ಸಿಬ್ಬಂದಿ ಅಖಿಲನ್ ಮೇಲೆ ಚೂರಿಯಿಂದ ದಾಳಿ ನಡೆಸಲಾಗಿದೆ ಮತ್ತು ಈ ಅಪರಾಧಕ್ಕಾಗಿ ಒಬ್ಬನನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಈ ಪೋಸ್ಟ್ ನಲ್ಲಿ ಪ್ರಕಟಿಸಿದ್ದರು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.
ಇದೇ ವಿಷಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಹುಡುಕಾಡಿದಾಗ, 2017, ಏ.22ರಂದು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾದ ಸುದ್ದಿ ಪತ್ತೆಯಾಯಿತು. ಆ ವರದಿಯ ಪ್ರಕಾರ, ಬೀಚ್ ನಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ, ಸ್ಲಮ್ ಕ್ಲಿಯರೆನ್ಸ್ ಬೋರ್ಡ್ ಅಪಾರ್ಟ್ ಮೆಂಟ್ ಮುಂದೆ ಇಬ್ಬರು ಮದ್ಯಪಾನ ಸೇವಿಸುತ್ತಿರುವುದನ್ನು ಗಮನಿಸಿದರು. ಆ ಜಾಗದಿಂದ ಅವರನ್ನು ತೆರಳುವಂತೆ ಸೂಚಿಸಿದಾಗ, ಅವರು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿದರು. ಘಟನೆಗೆ ಸಂಬಂಧಿಸಿ ಅಣ್ಣಾ ನಗರದ ಹರಿರಾಮ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹರಿರಾಮ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿಯಲ್ಲಿ ತಿಳಿಸಲಾಗಿತ್ತು. ಪರಾರಿಯಾಗಿದ್ದ ಇನ್ನೋರ್ವ ವ್ಯಕ್ತಿಯ ಹೆಸರು ದಿನೇಶ್ ಎಂಬುದಾಗಿತ್ತು.
ಆದರೆ, ಮೂರು ವರ್ಷಗಳ ಹಿಂದೆ ನಡೆದ ಈ ಘಟನೆಗೆ ಈಗ ಬೇರೆ ಬಣ್ಣ ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ದುಷ್ಕರ್ಮಿಗಳು ದ್ವೇಷ ಹರಡುತ್ತಿದ್ದಾರೆ. ಆ ದಿನ ರಾತ್ರಿ ಆಲ್ಕೊಹಾಲ್ ಸೇವಿಸುತ್ತಿದ್ದ ಯುವಕರು ಗಾಂಜಾ ಸೇವಿಸಿ ‘ಮಹಿಳೆಗೆ ಕಿರುಕುಳ’ ನೀಡಿದ ಉಲ್ಲೇಖಗಳಿಲ್ಲ. ಅಲ್ಲದೆ, ಮುಸ್ಲಿಮ್ ಸಮುದಾಯದವರೂ ಅಲ್ಲ. ಆದರೂ, ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ.
ಕೃಪೆ : ಆಲ್ಟ್ ನ್ಯೂಸ್