Home ಟಾಪ್ ಸುದ್ದಿಗಳು ದ್ವೇಷ ಭಾಷಣಗಳ ವಿರುದ್ಧ ಕೊನೆಗೂ ಎಚ್ಚೆತ್ತ ಫೇಸ್ ಬುಕ್ । ಬಿಜೆಪಿ ಶಾಸಕ ರಾಜಾ ಸಿಂಗ್...

ದ್ವೇಷ ಭಾಷಣಗಳ ವಿರುದ್ಧ ಕೊನೆಗೂ ಎಚ್ಚೆತ್ತ ಫೇಸ್ ಬುಕ್ । ಬಿಜೆಪಿ ಶಾಸಕ ರಾಜಾ ಸಿಂಗ್ ಫೇಸ್ ಬುಕ್ ಖಾತೆಯೇ ಔಟ್

► ಸರಣಿ ವರದಿಗಳ ಬಳಿಕ ಎಫ್ ಬಿಯಿಂದ ನಿಷೇಧ ಹೇರಿಕೆ


ನವದೆಹಲಿ : ತನ್ನ ಹಾಗೂ ಬಿಜೆಪಿ ಪಕ್ಷದ ನಡುವೆ ಇದ್ದ ನಂಟಿನ ಸರಣಿ ವರದಿಗಳಿಂದ ಬಿಸಿಮುಟ್ಟಿರುವ ಫೇಸ್ ಬುಕ್ ಇದೀಗ ದ್ವೇಷ ಭಾಷಣಕಾರರ ವಿರುದ್ಧ ಕ್ರಮಕ್ಕೆ ಒಂದು ಹೆಜ್ಜೆ ಮುಂದಿಟ್ಟಿದೆ. ದ್ವೇಷ ಭಾಷಣಕ್ಕಾಗಿಯೇ ಕುಖ್ಯಾತಿ ಪಡೆದಿರುವ ಬಿಜೆಪಿ ನಾಯಕ ಟಿ. ರಾಜಾ ಸಿಂಗ್ ಗೆ ಫೇಸ್ ಬುಕ್ ನಿಷೇಧ ಹೇರಿದೆ. ಅಲ್ಲದೆ, ತನ್ನ ಸಹಸಂಸ್ಥೆ ಇನ್ಸ್ಟಾಗ್ರಾಮ್ ನಿಂದಲೂ ರಾಜಾ ಸಿಂಗ್ ನನ್ನು ಹೊರಹಾಕಲಾಗಿದೆ. ದ್ವೇಷ ಭಾಷಣ ಪ್ರವರ್ತಿಸಿದ್ದಕ್ಕಾಗಿ ಮತ್ತು ತನ್ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಷೇಧ ಹೇರಲಾಗಿದೆ ಎಂದು ಫೇಸ್ ಬುಕ್ ಹೇಳಿಕೊಂಡಿದೆ.

“ನಮ್ಮ ವೇದಿಕೆಯಲ್ಲಿ ಹಿಂಸೆ ಮತ್ತು ದ್ವೇಷವನ್ನು ಪ್ರವರ್ತಿಸುವುದರಲ್ಲಿ ನಿರತರಾಗದಿರುವ ನೀತಿಯನ್ನು ಉಲ್ಲಂಘಿಸಿದುದಕ್ಕಾಗಿ ನಾವು ರಾಜಾ ಸಿಂಗ್ ಗೆ ಫೇಸ್ ಬುಕ್ ನಿಂದ ನಿಷೇಧ ಹೇರಿದ್ದೇವೆ’’ ಎಂದು ಫೇಸ್ ಬುಕ್ ವಕ್ತಾರ ಹೇಳಿದ್ದಾರೆ.
ಸತತ ನೀತಿ ಉಲ್ಲಂಘಿಸುವ ಸಂಭವವಿರುವವರ ಬಗ್ಗೆ ಪರಿಶೀಲಿಸುವ ಪ್ರಕ್ರಿಯೆಯಲ್ಲಿ, ಫೇಸ್ ಬುಕ್ ರಾಜಾ ಸಿಂಗ್ ನ ಖಾತೆಯನ್ನೇ ರದ್ದುಗೊಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಶಾಸಕ ರಾಜಾ ಸಿಂಗ್ ನ ದ್ವೇಷ ಭಾಷಣದ ಪೋಸ್ಟ್ ಗಳನ್ನು ಫೇಸ್ ಬುಕ್ ನಿರ್ಲಕ್ಷಿಸಿತ್ತು. ಆ ಮೂಲಕ ಬಿಜೆಪಿ ಮತ್ತು ಫೇಸ್ ಬುಕ್ ಇಂಡಿಯಾ ನಡುವಿನ ಅನೈತಿಕ ನಂಟಿನ ಕುರಿತಂತೆ ಅಮೆರಿಕದ ಮ್ಯಾಗಜಿನ್ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು. ಇದು ಭಾರತದಲ್ಲಿ ಭಾರಿ ಸಂಚಲನವನ್ನುಂಟು ಮಾಡಿತ್ತು. ಫೇಸ್ ಬುಕ್ ವಿರುದ್ಧ ದೇಶದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿತ್ತು.

Join Whatsapp
Exit mobile version