Home ಕರಾವಳಿ ತೈಲ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ ಎಂದ ಕೇಂದ್ರ ಸರ್ಕಾರ, ಉಪಚುನಾವಣೆಯಲ್ಲಿ ಸೋತ ಕೂಡಲೇ...

ತೈಲ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ ಎಂದ ಕೇಂದ್ರ ಸರ್ಕಾರ, ಉಪಚುನಾವಣೆಯಲ್ಲಿ ಸೋತ ಕೂಡಲೇ ಇಳಿಕೆ ಮಾಡಿದೆ: ಯು.ಟಿ ಖಾದರ್

ಮಂಗಳೂರು: ತೈಲ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ ಎನ್ನುತ್ತಿದ್ದ ಕೇಂದ್ರ ಸರ್ಕಾರವು ಉಪಚುನಾವಣೆ ಸೋತ ಕೂಡಲೇ ದರ ಇಳಿಕೆ ಮಾಡಿದೆ. ಇದು ಕೇಂದ್ರ ಸರ್ಕಾರದ ಸೋಲು, ಜನ ಸಾಮಾನ್ಯರ ಗೆಲುವಾಗಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. ಇದು ಜನರ ಆಕ್ರೋಶದ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂದರು.


ತೈಲ ಬೆಲೆಯನ್ನು 70 ರೂಪಾಯಿಗೆ ಹೆಚ್ಚಿಸಲು ಕಾಂಗ್ರೆಸ್ ಗೆ 70 ವರ್ಷ ಬೇಕಾಯಿತು. ಆದರೆ ಇವರಿಗೆ ಏಳು ಸಾಕಾಗಿದೆ ಎಂದು ವ್ಯಂಗ್ಯವಾಡಿದ ಅವರು, ದಿನ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿಲ್ಲ. ಇದರ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಾ ಇದೆ. ಇದರ ಬಗ್ಗೆ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ದಿನ ಬಳಕೆ ವಸ್ತುಗಳ ಬೆಲೆ ಇಳಿಕೆಗೆ ಆದೇಶ ಹೊರಡಿಸಲಿ. ಕಾರ್ಪೊರೇಟ್ ಸಂಸ್ಥೆಗಳ ಭಾರ ಇಳಿಸಲು ಹೋಗಿ ಜನರಿಗೆ ಹೊರೆ ಹಾಕುವುದು ಬೇಡ. ಈ ಸರಕಾರದ ಸಾಧನೆ ಇಡೀ ಏಷ್ಯಾದಲ್ಲೇ ಪೆಟ್ರೋಲ್ ಬಲೆ ಅತ್ಯಧಿಕ ಹೆಚ್ಚಳ ಮಾಡಿರುವುದೇ ಆಗಿದೆ. ಆರ್ಥಿಕವಾಗಿ ಹಿಂದುಳಿದ ಸಣ್ಣ ರಾಷ್ಟ್ರದಲ್ಲಿ ತೈಲ ಬೆಲೆ ಕಮ್ಮಿ ಇದೆ ಎಂದು ಕೇಂದ್ರ, ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದರು.


ರಾಜ್ಯ ರಾಜೋತ್ಸವ ಪ್ರಶಸ್ತಿಯ ವಿತರಣೆ ಹಿನ್ನೆಲೆ ದ.ಕ ಜಿಲ್ಲೆಯ ಸಂಸ್ಕೃತಿ ಪರಂಪರೆಯ ಯಕ್ಷಗಾನ, ಭರತನಾಟ್ಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿ ಅಧಿಕಾರಕ್ಕೆ ಬಂದವರು ಈಗ ಎಲ್ಲಿದ್ದಾರೆ ಎಂದು ಕುಟುಕಿದ ಯು.ಟಿ.ಖಾದರ್, ಇಲ್ಲಿನ ಸಂಸ್ಕೃತಿಯನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲೆಗೆ ಅವಮಾನ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಭಾಗದವರೇ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ಆದರೆ ಸಾಧಕರನ್ನು ಗುರುತಿಸಲು ಸಾಧ್ಯವಾಗದಿರುವುದು ಸಚಿವರ ವೈಫಲ್ಯ ಎಂದು ಹೇಳಿದರು.


ಮಾಜಿ ಸಿಎಂ ಸಿದ್ದರಾಮಯ್ಯರಿಂದ ದಲಿತರ ಅಮಾನ ಆಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ವಾದಿಸುವವರು ಯಾರು ಅಂಬೇಡ್ಕರ್ ವಾದಿಗಳಲ್ಲ ಗೋಡ್ಸೇ ವಾದಿಗಳು. ಈ ಹಿಂದೆ ಸಂವಿಧಾನದ ವಿರುದ್ಧ ಮಾತನಾಡಿದಾಗ ಈ ನಕಲಿ ಹೋರಾಟಗಾರರು ಎಲ್ಲಿದ್ದರು? ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿಲ್ಲ ಎಂದಾಗ ಇವರು ಎಲ್ಲಿದ್ದರು ? ಹೋರಾಟ ಮಾಡುತ್ತಿರುವ ದಲಿತರು ಬಿಜೆಪಿ ಕಚೇರಿಗೆ ಹೋಗಿ ಮಾತಾನಾಡಲಿ. ದಲಿತ ಮೀಸಲಾತಿ ನಾವು ತಂದಿದ್ದು ನಮ್ಮ ಆಡಳಿತದಲ್ಲಿ ದಲಿತರಿಗೆ ಅನೇಕ ಯೋಜನೆ ಜಾರಿಯಾಗಿದೆ. ನಾವು ದಲಿತರಿಗೆ ಕೇಳಿದಷ್ಟು ನಿವೇಶನ ನೀಡಿದ್ದೇವೆ. ಇವರು ಅಧಿಕಾರಕ್ಕೆ ಬಂದು ಏನು ನೀಡಿದ್ದಾರೆ ಎಂದು ಖಾದರ್ ಪ್ರಶ್ನಿಸಿದರು.

Join Whatsapp
Exit mobile version