ಮಡಿಕೇರಿ: ಕಾಫಿ ಪಲ್ಪಿಂಗ್ ಮಾಡಿದ ನೀರನ್ನು ಹೊನವಳಿ ನದಿಗೆ ಬಿಡುವುದಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾಫಿ ಪಲ್ಪಿಂಗ್ ಮಾಡುವ ನೀರನ್ನು ನದಿಗೆ ಬಿಡುತ್ತಿರುವ ವೀಡಿಯೋವನ್ನು ಕರವೇ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕ್ರಮಕ್ಕೆ ಒತ್ತಾಯಿಸಿದ್ದರು.
ಸದ್ಯ ವಿಡಿಯೋ ನೋಡಿದ ಪ್ರಭಾರ ಪರಿಸರ ಅಧಿಕಾರಿಗಳಾದ ಡಾಕ್ಟರ್ ಎಂ .ಆರ್ ಸುಧಾ, ಇಂದು ಹೊನ್ನವಳ್ಳಿಯ ಕಾಫಿ ಪಲ್ಪರ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕೂಗೆಕೋಡಿ ಗ್ರಾಮದ ಕಾಫಿ ಪಲ್ಪರ್ ಕೆ. ಬಿ ಚಂದ್ರಶೇಖರ್ ಪಲ್ಪಿಂಗ್ ಮಾಡಿದ ನೀರನ್ನು ನದಿಗೆ ಬಿಟ್ಟಿರುವುದನ್ನು ಖಚಿತ ಪಡಿಸಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನದಿಗೆ ಬಿಡಲಾದ ಕಾಫಿ ಕಲ್ಮಶವನ್ನು ತೆಗೆದು ಸ್ವಚ್ಚಗೊಳಿಸುವಂತೆ ಸ್ಥಳದಲ್ಲೇ ಆದೇಶಿಸಿದರು. ಇದೇ ವೇಳೆ ಕರವೇ ಕಾರ್ಯಕರ್ತರು ಕಾಫಿ ಪಲ್ಪರ್ ಮನೆಯನ್ನು ಸೀಜ್ ಮಾಡಬೇಕೆಂದು ಮನವಿ ಸಲ್ಲಿಸಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಿಂದ ಹೊನವಳಿ ಹೊಳೆ ಹರಿದು ಕೂಗೆಕೋಡಿ ಮಾರ್ಗವಾಗಿ ಅಜ್ಜಳ್ಳಿ ಕೋಟೆ, ಬಸವನಕೊಪ್ಪ ಮತ್ತು ಶಾಂತವೇರಿ ಮಾರ್ಗವಾಗಿ ಹರಿದು ಶನಿವಾರಸಂತೆಯ ಗೊರೂರು ಡ್ಯಾಮಿಗೆ ನೀರು ಸೇರುತ್ತದೆ.