ಮಂಗಳೂರು: ಬಂಗ್ರಕುಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕ್ಯಾ.ಬೃಜೇಶ್ ಚೌಟ ನೇತೃತ್ವದ 6ನೇ ವರ್ಷದ ರಾಮ ಲಕ್ಷ್ಮಣ ಕಂಬಳಕ್ಕೆ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರೋಡಿ ವಿಧ್ಯುಕ್ತ ಚಾಲನೆ ನೀಡಿದ್ದಾರೆ.
ರಾಮ ಲಕ್ಷ್ಮಣ ಕಂಬಳದ ಕರೆಯಲ್ಲಿ ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಚಿತ್ತರಂಜನ್ ಗರೋಡಿ ದೀಪ ಹೊತ್ತಿಸಿ ಉದ್ಘಾಟನೆ ನೆರವೇರಿಸಿದರು. ಕಂಬಳದ ಕರೆಯಲ್ಲಿಯೇ ಕಳಸೆಯಲ್ಲಿ ತೆಂಗಿನ ಹೂವನ್ನು ಅರಳಿಸಿ ಕೊಂಡೆವೂರು ಶ್ರೀಗಳು ಕರೆಯನ್ನು ಉದ್ದೀಪನಗೊಳಿಸಿದರು. ಕಂಬಳದ ವೇದಿಕೆಯಲ್ಲಿ ದೀಪ ಹಚ್ಚಿ ಮತ್ತು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ರಾವ್ ವೇದಿಕೆಗೆ ಚಾಲನೆ ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ನಿವೃತ್ತ ಬ್ರಿಗೇಡಿಯರ್ ಐಎನ್ ರೈ, ಕುಡಂಬೂರು ಗುತ್ತಿನ ಗುತ್ತಿನಾರ್ ಜಯರಾಮ ಶೆಟ್ಟಿ, ಅರಸು ಕುಂಜಿರಾಯ ದೇವಸ್ಥಾನದ ಗುತ್ತಿನಾರ್ ಜಯರಾಮ ಮುಕ್ಕಾಲ್ತಿ, ಪಿಆರ್ ಶೆಟ್ಟಿ ಕುಳೂರು ಪೊಯ್ಯೆಲು ಉಪಸ್ಥಿತರಿದ್ದರು.
ಕಂಬಳ ಕ್ಷೇತ್ರದ ಅಪ್ರತಿಮ ಸಾಧಕ ಕೋಣಗಳಾದ ಕೊಳಚ್ಚೂರು ಕಂಡೆಟ್ಟು ಸುಕುಮಾರ ಶೆಟ್ಟಿಯವರ ಚೆನ್ನೆ ಮತ್ತು ಬೋಳದ ಗುತ್ತಿನ ಬೊಳ್ಳೆ ಕೋಣಗಳನ್ನು ಮೊದಲಾಗಿ ರಾಮ ಲಕ್ಷ್ಮಣ ಕರೆಗೆ ಇಳಿಸಿ ಗೌರವ ನೀಡಲಾಯಿತು. ಮಂಗಳೂರು ಕಂಬಳ ಸಮಿತಿ ವತಿಯಿಂದ ಅತಿಥಿಗಳೇ ಸಾಧಕ ಕೋಣಗಳಿಗೆ ನೊಗ, ನೆತ್ತಿ ಹಗ್ಗ, ಪಾವಡೆಗಳನ್ನು ಕಟ್ಟಿ ಕರೆಗೆ ಇಳಿಸಿದ್ದು ವಿಶೇಷವಾಗಿತ್ತು. ಆ ಮೂಲಕ ಮಂಗಳೂರು ಕಂಬಳಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಇದೇ ವೇಳೆ, ಏರ್ಪಡಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರಕಿತ್ತು. ವರ್ಣಚಿತ್ರ ಸ್ಪರ್ಧೆಯಲ್ಲಿ ರಂಗ್ ದ ಎಲ್ಯ, ರಂಗ್ ದ ಮಲ್ಲ, ರಂಗ್ ದ ಕೂಟ ಎನ್ನುವ ಹೆಸರಲ್ಲಿ ಮೂರು ವಿಭಾಗಗಳಿದ್ದವು. ಮಂಗಳೂರಿನ ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ‘ರಂಗ್ ದ ಎಲ್ಯ’ ವಿಭಾಗದಲ್ಲಿ ಪ್ರಥಮ ಹನ್ಸಿಕಾ, ದ್ವಿತೀಯ ಸಾಚಿ ಕೆ., ತೃತೀಯ ವಂಶಿಕ, ‘ರಂಗ್ ದ ಮಲ್ಲ’ ವಿಭಾಗದಲ್ಲಿ ಪ್ರಥಮ ಅಖಿಲ್ ಶರ್ಮಾ, ದ್ವಿತೀಯ ಅನ್ವಿತ್ ಹರೀಶ್, ತೃತೀಯ ಅಕ್ಷಜ್, ‘ರಂಗ್ ದ ಕೂಟ’ ವಿಭಾಗದಲ್ಲಿ ಪ್ರಥಮ ಜಯಶ್ರೀ ಶರ್ಮಾ, ದ್ವಿತೀಯ ವೈ.ಆಯುಷ್, ತೃತೀಯ ಖುಷಿ ಪಿ. ಕುಂದರ್ ವಿಜೇತರಾಗಿದ್ದಾರೆ.
ಮಂಗಳೂರು ನಗರದಲ್ಲಿ ನಡೆಯುವ ಕಂಬಳವನ್ನು ವೀಕ್ಷಿಸಲು ವಿದೇಶಿಯರು ಕೂಡ ಆಗಮಿಸಿದ್ದರು. ಅಪ್ಘಾನಿಸ್ತಾನದ ಸಂಶೋಧನಾ ವಿದ್ಯಾರ್ಥಿಗಳು ಕಂಬಳಕ್ಕೆ ಬಂದಿದ್ದು ಇಲ್ಲಿನ ಜನಪದ ಕ್ರೀಡೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಕೋಣಗಳ ಜೋಡಿಗಳು ಆಗಮಿಸಿದ್ದು ಆರು ವಿವಿಧ ವಿಭಾಗದಲ್ಲಿ ಸ್ಪರ್ಧಿಸಲಿವೆ. ಕಂಬಳ ಸಮಿತಿಯ ಸುಜಿತ್ ಪ್ರತಾಪ ನಗರ, ಲೋಕೇಶ್ ಶೆಟ್ಟಿ ಕೊಡೆತ್ತೂರು, ಪ್ರೀತಮ್ ರೈ, ಈಶ್ವರ್ ಪ್ರಸಾದ್ ಶೆಟ್ಟಿ, ಹರೀಶ್ ರೈ, ಪ್ರಕಾಶ್ ಗರೋಡಿ, ಸಚಿನ್ ಶೆಟ್ಟಿ ಮತ್ತಿತರರಿದ್ದರು.