ಅಂತಿಮ ವಿಕೆಟ್ ಜೊತೆಯಾಟದಲ್ಲಿ ತೋರಿದ ದಿಟ್ಟ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬಾಂಗ್ಲಾದೇಶ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಅಂತರದ ವೀರೋಚಿತ ಜಯ ಸಾಧಿಸಿದೆ.
ಮೀರ್‌ಪುರ್ ಮೈದಾನದಲ್ಲಿ ಭಾರತ ನೀಡಿದ್ದ 187 ರನ್‌ಗಳ ಸುಲಭ ಸವಾಲನ್ನು ಬೆನ್ನಟ್ಟುವ ವೇಳೆ, ಆತಿಥೇಯ ಬಾಂಗ್ಲಾದೇಶ, 39.3 ಓವರ್‌ಗಳಲ್ಲಿ 136 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಕೇವಲ 1 ವಿಕೆಟ್ ಉಳಿಸಿಕೊಂಡಿದ್ದ ಬಾಂಗ್ಲಾ ಎದುರಿಗೆ 51 ರನ್ ಗಳಿಸಬೇಕಾದ ಕಠಿಣ ಸವಾಲು ಮುಂದಿತ್ತು. ಆದರೆ ಧೃತಿಗೆಡೆದೆ ಕ್ರೀಸ್‌ನಲ್ಲಿ ನಿಂತ ಮೆಹ್ದಿ ಹಸನ್ ಮಿರಾಝ್ ಮತ್ತು ಮುಸ್ತಫಿಝುರ್ ರಹ್ಮಾನ್ ತಂಡವನ್ನು ರೋಚಕ ಗೆಲುವಿನ ದಡ ಸೇರಿಸಿದರು.
39 ಎಸೆತಗಳನ್ನು ಎದುರಿಸಿದ ಮೆಹ್ದಿ ಹಸನ್ ಮಿರಾಝ್ 38 ಮತ್ತು 11 ರನ್‌ಗಳಿಸಿ ಮುಸ್ತಫಿಝುರ್ ರಹ್ಮಾನ್ ಅಜೇಯರಾಗುಳಿದರು.
ಬೌಲಿಂಗ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಅನುಭವಿ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್, ಬ್ಯಾಟಿಂಗ್‌ನಲ್ಲೂ 29 ರನ್ ಗಳಿಸಿದರು. ನಾಯಕ ಲಿಟ್ಟನ್ ದಾಸ್ 41, ಮುಶ್ಫಿಕುರ್ ರಹ್ಮಾನ್ 18 ರನ್ ಗಳಿಸಿದರು. ಭಾರತ ಪರ ಬೌಲಿಂಗ್‌ನಲ್ಲಿ ಮುಹಮ್ಮದ್ ಸಿರಾಜ್ 3 ಮತ್ತು ಕುಲ್‌ದೀಪ್ ಸೆನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು.
3 ಪಂದ್ಯಗಳ ಸರಣಿಯ 2ನೇ ಪಂದ್ಯ ಇದೇ ಮೈದಾನದಲ್ಲಿ ಬುಧವಾರ ನಡೆಯಲಿದೆ.