Home ಕ್ರೀಡೆ ಫಿಫಾ ವಿಶ್ವಕಪ್‌| ಸೆನೆಗಲ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್‌ 

ಫಿಫಾ ವಿಶ್ವಕಪ್‌| ಸೆನೆಗಲ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್‌ 

ಸೆನೆಗಲ್‌ ವಿರುದ್ಧದ ಪಂದ್ಯದಲ್ಲಿ 3-0 ಅಂತರದ ಭರ್ಜರಿ ಜಯ ದಾಖಲಿಸುವ  ಮೂಲಕ ಇಂಗ್ಲೆಂಡ್‌, ಫಿಫಾ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಕತಾರ್‌ನ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ಅಂತಿಮ 16 ಘಟ್ಟದ ಪಂದ್ಯದಲ್ಲಿ ಸೆನೆಗಲ್‌, ಯಾವುದೇ ಹಂತದಲ್ಲೂ ಸವಾಲೊಡ್ಡುವ ಪ್ರದರ್ಶನ ನೀಡಲಿಲ್ಲ. ಮೊದಲಾರ್ಧದ ಅಂತ್ಯದಲ್ಲೇ ಇಂಗ್ಲೆಂಡ್‌ 2-0 ಗೋಲುಗಳ ಮುನ್ನಡೆ ಸಾಧಿಸಿತ್ತು. 38ನೇ ನಿಮಿಷದಲ್ಲಿ ಜೋರ್ಡಾನ್ ಹೆಂಡರ್ಸನ್ ಮತ್ತು  45+3ನೇ ನಿಮಿಷದಲ್ಲಿ ನಾಯಕ ಹ್ಯಾರಿ ಕೇನ್ ಗೋಲು ಗಳಿಸಿ ಸೆನೆಗಲ್‌ಗೆ ಆಘಾತ ನೀಡಿದ್ದರು. 57ನೇ ನಿಮಿಷದಲ್ಲಿ ಬುಕಾಯೋ ಸಕಾ ಇಂಗ್ಲೆಂಡ್‌ ಪರವಾಗಿ ಮೂರನೇ ಗೋಲು ದಾಖಲಿಸಿದರು.

ದ್ವಿತೀಯಾರ್ಧದಲ್ಲೂ ಆಫ್ರಿಕನ್‌ ಚಾಂಪಿಯನ್ನರಿಂದ ನಿರೀಕ್ಷಿತ ಹೋರಾಟ ಕಂಡುಬರಲಿಲ್ಲ. ಇಡೀ ಪಂದ್ಯದಲ್ಲಿ ಕೇವಲ ಒಂದೇ ಒಂದು ʻಶಾಟ್‌ ಆನ್‌ ಟಾರ್ಗೆಟ್‌ʼ ಮಾತ್ರ ದಾಖಲಾಗಿತ್ತು.  ಮತ್ತೊಂದೆಡೆ ನಾಲ್ಕು  ʻಶಾಟ್‌ ಆನ್‌ ಟಾರ್ಗೆಟ್‌ʼನಲ್ಲಿ ಮೂರನ್ನು ಗೋಲಾಗಿ ಪರಿವರ್ತಿಸುವಲ್ಲಿ ಇಂಗ್ಲೆಂಡ್‌ ಯಶಸ್ವಿಯಾಯಿತು.

ಆಫ್ರಿಕನ್‌ ರಾಷ್ಟ್ರಗಳ ವಿರುದ್ಧದ ತಮ್ಮ ಗೆಲುವಿನ ಓಟವನ್ನು ಈ ಮೂಲಕ ಇಂಗ್ಲೆಂಡ್‌ ಮತ್ತೆ ಮುಂದುವರಿಸಿದೆ. ಫಿಫಾ ವಿಶ್ವಕಪ್‌ನಲ್ಲಿ 8 ಸೇರಿದಂತೆ  ಸತತ  21 ಪಂದ್ಯಗಳಲ್ಲಿ ಆಫ್ರಿಕನ್ನರ ವಿರುದ್ಧ ಆಂಗ್ಲರ ಅಜೇಯ ಪಯಣ ಮುಂದುವರಿದಿದೆ. ಸೆನೆಗಲ್‌ ತಂಡ 16ರ ಘಟ್ಟದಲ್ಲೇ ಹೊರಬೀಳುತ್ತಲೇ, ಮೊರಕ್ಕೊ, ಸದ್ಯ ಕತಾರ್ ನ ವಿಶ್ವಕಪ್ ಕಣದಲ್ಲಿ ಉಳಿದಿರುವ ಏಕೈಕ ಆಫ್ರಿಕನ್ ತಂಡವಾಗಿದೆ.

ಕ್ವಾರ್ಟರ್‌ಫೈನಲ್ ವೇಳಾಪಟ್ಟಿ

ಡಿಸೆಂಬರ್ 9: ನೆದರ್ಲ್ಯಾಂಡ್ vs ಅರ್ಜೆಂಟೀನಾ | ರಾತ್ರಿ 8:30 ಕ್ಕೆ

ಡಿಸೆಂಬರ್ 10: ಫ್ರಾನ್ಸ್ vs ಇಂಗ್ಲೆಂಡ್ | 12:30 AM

Join Whatsapp
Exit mobile version