ಭೋಪಾಲ್ : ಉಜ್ಜೈನಿ, ಮಂದ್ ಸೌರ್ ಮತ್ತು ಇಂದೋರ್ ನಲ್ಲಿ ಸಂಘ ಪರಿವಾರ ಸಂಘಟನೆಗಳು ನಡೆಸಿದ್ದ ಮೆರವಣಿಗೆ ವೇಳೆ, ಮುಸ್ಲಿಮರ ಮನೆಗಳು, ಮಸೀದಿಗಳ ಮೇಲೆ ದಾಳಿ ನಡೆದಿದ್ದರೂ, ಮುಸ್ಲಿಂ ಯುವಕರ ವಿರುದ್ಧವೇ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬೇಗಂಬಾಗ್ ನಿವಾಸಿಗಳಾದ ಅಯಾಝ್ ಮುಹಮ್ಮದ್, ವಾಸಿಂ ಅಸ್ಲಂ, ಶಾದಾಬ್ ಅಕ್ರಮ್ ಮತ್ತು ಅಲ್ತು ಅಸ್ಲಾಮ್ ವಿರುದ್ಧ ಉಜ್ಜೈನಿ ಕಲೆಕ್ಟರ್ ರಾಷ್ಟ್ರೀಯ ಭದ್ರತಾ ಕಾಯ್ದೆ (NSA)ಯಡಿ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ, ಬೇಗಂಬಾಗ್ ನಿವಾಸಿಯ ಮೂರು ಅಂತಸ್ತಿನ ಕಟ್ಟಡ ಕಾನೂನು ಬಾಹಿರ ಎಂದು ಆರೋಪಿಸಿ, ನೆಲಸಮ ಮಾಡಲಾಗಿದೆ ಎಂದೂ ವರದಿಯಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಮೆರವಣಿಗೆಯ ವೇಳೆ ಕೆಲವೆಡೆ ಹಿಂಸಾಚಾರ ನಡೆದಿತ್ತು. ಮಂದ್ ಸೌರ್ ನ ದೊರೊನದಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಂದಿ ಮೆರವಣಿಗೆ ನಡೆಸಿ, ಮಸೀದಿಯ ಗೋಪುರದ ಮೇಲೆ ಕೇಸರಿ ಧ್ವಜ ನೆಟ್ಟು, ಹಾನಿ ಮಾಡಿದ್ದರು. ಈ ಘಟನೆಯ ಬಳಿಕ ಸ್ಥಳೀಯರು ಮನೆಗಳನ್ನು ತೊರೆದಿದ್ದು, ಪೊಲೀಸರ ರಕ್ಷಣೆ ಕೇಳಿದ್ದರು.