ರಾಜಾನುಕುಂಟೆಯಲ್ಲಿ 18 ಎಕರೆ ಪ್ರದೇಶದಲ್ಲಿ ನೃಪತುಂಗ ವಿಶ್ವವಿದ್ಯಾನಿಲಯ ಸ್ಥಾಪನೆ: ಎಸ್. ಆರ್ ವಿಶ್ವನಾಥ್

Prasthutha|

ಬೆಂಗಳೂರು: ರಾಜಾನುಕುಂಟೆಯಲ್ಲಿ 18 ಎಕರೆ ಜಾಗದಲ್ಲಿ ನೃಪತುಂಗ ವಿಶ್ವವಿದ್ಯಾನಿಲಯವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಯಲಹಂಕ ಕ್ಷೇತ್ರದ ಶಾಸಕ, ಬಿಡಿಎ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್. ಆರ್ ವಿಶ್ವನಾಥ್ ತಿಳಿಸಿದರು.

- Advertisement -


ಇಂದು ಕಾಲೇಜು ಶಿಕ್ಷಣ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕಟ್ಟಡಗಳ ಹಾಗೂ 2021-22ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಹಾಗೂ ಉತ್ತಮ ಉದ್ಯೋಗವನ್ನು ಹೊಂದುವ ಮೂಲಕ ಉತ್ತಮ ಜೀವನ ನಡೆಸಲು ಸರಿ ಹೊಂದುವಂತೆ ಒಂದು ವರ್ಷದ ಉದ್ಯೋಗ ಆಧಾರಿತ ಕೋರ್ಸ್ ಗಳನ್ನು ಈ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಕಾಲೇಜು ಕಟ್ಟಡ ಕಾಮಗಾರಿಗಳಿಗಾಗಿ ರೂ 1 ಕೋಟಿ, ಡಿಜಿಟಲ್ ಕಂಪ್ಯೂಟರ್ ಕೊಠಡಿ ಅಭಿವೃದ್ಧಿಗಾಗಿ 1 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಲೇಜು ಅಭಿವೃದ್ಧಿಗಾಗಿ ಹೆಚ್ಚು ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.


ಪ್ರಾಸ್ತವಿಕ ಭಾಷಣ ಮಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಗೀತಾ .ಏನ್ ರವರು, 2007 ರಲ್ಲಿ ಎರಡಂಕಿ ಸಂಖ್ಯೆಯಲ್ಲಿ ಆರಂಭಗೊಂಡ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂದು 4000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೊದಲು 4 ಶಿಫ್ಟ್ ಗಳಲ್ಲಿ ಕಾಲೇಜು ನಡೆಯುತ್ತಿತ್ತು, ಆದರೆ ಈಗ ಕಲಾ, ವಿಜ್ಞಾನ, ವಾಣಿಜ್ಯ-ನಿರ್ವಹಣೆ ಹಾಗೂ ಗ್ರಂಥಾಲಯ, ಮಾಹಿತಿ ವಿಜ್ಞಾನ ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ಪ್ರತ್ಯೇಕ ಕಟ್ಟಡಗಳು ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದರು.
2020 ರಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕೋಟಿ ಮೊತ್ತದ ಕಟ್ಟಡ ಕಾಮಗಾರಿಯು ಬಿಬಿಎಂಪಿ ವತಿಯಿಂದ ಶಾಸಕರ ನೇತೃತ್ವದ ಮಾರ್ಗದರ್ಶನದಲ್ಲಿ ವಿಜ್ಞಾನ ವಿಭಾಗದ ಮೂರನೇ ಮಹಡಿಯಲ್ಲಿ 7 ತರಗತಿ ಕೊಠಡಿಗಳು ಹಾಗೂ ಕಲಾವಿಭಾಗಕ್ಕಾಗಿ 12 ತರಗತಿ ಕೊಠಡಿಗಳು, ನೆಲಮಹಡಿಯಲ್ಲಿ ಕ್ಯಾಂಟೀನ್ ಗಾಗಿ ಒಂದು ದೊಡ್ಡ ಕೊಠಡಿ ನಿರ್ಮಾಣಗೊಂಡಿದೆ ಎಂದು ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ಕೂರಲು 200 ಡೆಸ್ಕ್ ಗಳ ಅವಶ್ಯಕತೆ ಇದ್ದು ,ಇದನ್ನು ಪೂರೈಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ, ರಾಜ್ಯ ಹಾಗೂ ಅಂತರ್ ಕಾಲೇಜು ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧ್ಯಕ್ಷರಾದ ಡಾ. ಬಿ. ವಿ. ವಸಂತಕುಮಾರ್, ಕಾಲೇಜಿನ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Join Whatsapp
Exit mobile version