ಮಡಿಕೇರಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಕಡುಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉಪಯೋಗವಾಗಿದೆ ಎಂದು ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪಂಚಾಯತ್, ವಿರಾಜಪೇಟೆ ತಾಲೂಕು ಪಂಚಾಯತ್, ಕೆ.ಬಾಡಗ ಗ್ರಾಮ ಪಾಂಚಾಯತ್ ಮತ್ತು ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿರಾಜಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 16 ನೇ ವರ್ಷದ ನರೇಗಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ತರ ಯೋಜನೆ ಇದಾಗಿದೆ. ಮುಖ್ಯವಾಗಿ ವಲಸೆ ತಡೆಗಟ್ಟಿ ಇರುವಲ್ಲಿಯೇ ಕೆಲಸ ನೀಡುವ ಯೋಜನೆಯಾಗಿದೆ. ವೈಯಕ್ತಿಕ ಕಾಮಗಾರಿ ಅಡಿ ಜೀವಿತಾವಧಿಯಲ್ಲಿ ರೂ.2.5 ಲಕ್ಷದ ವರೆಗೆ ಉಚಿತ ಕಾಮಗಾರಿ ಪಡೆಯಬಹುದು. 2002 ಫೆಬ್ರವರಿ 2 ನೇ ತಾರೀಖು ದೇಶದ 200 ಹಿಂದುಳಿದ ಜಿಲ್ಲೆಗಳಲ್ಲಿ ಪ್ರಥಮವಾಗಿ ನರೇಗಾ ಯೋಜನೆ ಜಾರಿಗೊಳಿಸಲಾಯಿತು. ಈ ದಿನವನ್ನು ನರೇಗಾ ದಿನವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ನರೇಗಾ ನೌಕರರ ಸಂಘದ ಸದಸ್ಯರು ಗ್ರಾಮ ಮಟ್ಟದಲ್ಲಿ ಯೋಜನೆಗಳ ಅನುಷ್ಠಾ ಗೊಳಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ರೀತಿಯ ಉದ್ಯಾನವಗಳು ನಿರ್ಮಾಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಕೂಡ ಗ್ರಾಮೀಣ ಭಾಗದಲ್ಲಿ ಜಾಬ್ ಕರ‍್ಡ್ಗಳನ್ನು ಹೊಂದಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಅವರು ಮಾತನಾಡಿ, ಕೆ.ಬಾಡಗ ವಿರಾಜಪೇಟೆ ತಾಲೂಕಿನಲ್ಲಿ ಚಿಕ್ಕ ಗ್ರಾಮಪಂಚಾಯಿತಿ ಆಗಿದ್ದರೂ ಸಹ ತಾಲೂಕಿನಲ್ಲಿಯೇ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದೆ. ಜೊತೆಗೆ ಪರಿಶಿಷ್ಟ ಪಂಗಡದವರ ಭಾಗವಹಿಸುವಿಕೆಯಲ್ಲಿಯೂ ಮುಂದಿದೆ. ಈ ನಿಟ್ಟಿನಲ್ಲಿ ಕೆ.ಬಾಡಗ ಪಂಚಾಯಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.