Home ಟಾಪ್ ಸುದ್ದಿಗಳು ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಶಬ್ದ ಮಾಲಿನ್ಯ ಕುರಿತ ನೋಟಿಸ್ ವಾಪಸು ಪಡೆಯಲಾಗಿದೆ: ಆರಗ ಜ್ಞಾನೇಂದ್ರ

ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಶಬ್ದ ಮಾಲಿನ್ಯ ಕುರಿತ ನೋಟಿಸ್ ವಾಪಸು ಪಡೆಯಲಾಗಿದೆ: ಆರಗ ಜ್ಞಾನೇಂದ್ರ

ಬೆಂಗಳೂರು: ದೇವಸ್ಥಾನಗಳಲ್ಲಿ ಪೂಜಾ ವಿಧಿಗಳಲ್ಲಿ ಒಂದಾದ ಜಾಗಟೆ, ಗಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂಬ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆಯು ಹಿಂಪಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ಇಂದು  ತಿಳಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕರಾದ ಸಿ ಟಿ ರವಿ ಮತ್ತು ರವಿಸುಬ್ರಹ್ಮಣ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ  ಗೃಹ ಸಚಿವರು,  ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

 ಯಾವ ಧಾರ್ಮಿಕ ಕೇಂದ್ರಗಳಲ್ಲಿ ಮುಂಜಾನೆ ಈ ರೀತಿಯ ಶಬ್ದ ಉಂಟಾಗುತ್ತಿತ್ತೋ ಅಂತಹ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ನೋಟಿಸ್ ನೀಡಲಾಗಿದೆ. ಇದು ಯಾವುದೇ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿರಲಿಲ್ಲ. ಇದರಿಂದ ಕೆಲವು ಗೊಂದಲ ಉಂಟಾಗಿದ್ದರಿಂದ ಈಗ ಆದೇಶವನ್ನು ಹಿಂಪಡೆಯಲಾಗಿದೆ ಎಂದರು.

ಇದಕ್ಕೂ ಮುನ್ನ ಸಿ.ಟಿ.ರವಿ ಮಾತನಾಡಿ, ಸಾವಿರಾರು ವರ್ಷಗಳಿಂದ ದೇವಸ್ಥಾನ ಮತ್ತು ಮನೆಗಳಲ್ಲಿ ಪೂಜೆ, ಪುನಸ್ಕಾರ ಮಾಡುವಾಗ ಶಂಖ ಊದುವುದು, ಗಂಟೆ ಬಾರಿಸುವುದು, ಜಾಗಟೆ ಬಾರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾವಿರಾರು ವರ್ಷಗಳಿಂದಲೂ ಈ ಬಗ್ಗೆ ಯಾರೂ ಕೂಡ ತಕರಾರು ತೆಗೆದಿರಲಿಲ್ಲ. ಈಗ ಏಕಾಏಕಿ ಆಕ್ಷೇಪ ಇದೆ. ಇದರ ಹಿಂದೆ ಯಾವುದಾದರೂ ಪಿತೂರಿ ಇದೆಯೇ ಎಂದು ಪ್ರಶ್ನಿಸಿದ್ದರು.

Join Whatsapp
Exit mobile version