ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿಗೆ ಬಂದು ನಮಾಝ್ ನಿರ್ವಹಿಸಲು ಯಾವುದೇ ರೀತಿಯ ನಿರ್ಬಂಧ ಇಲ್ಲ ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ -ಎಐಎಂಪಿಎಲ್’ಬಿ ಸುಪ್ರೀಂಕೋರ್ಟ್’ಗೆ ಬುಧವಾರ ಹೇಳಿದೆ.
ಮುಸ್ಲಿಂ ಮಹಿಳೆ ನಮಾಝ್’ಗಾಗಿ ಮಸೀದಿ ಪ್ರವೇಶಿಸಲು ಮುಕ್ತರಾಗಿದ್ದಾರೆ ಮತ್ತು ಮಸೀದಿಯಲ್ಲಿ ಪ್ರಾರ್ಥನೆಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ತನ್ನ ಹಕ್ಕನ್ನು ಚಲಾಯಿಸುವುದು ಅವರ ಆಯ್ಕೆಯಾಗಿದೆ ಎಂದು ಮಂಡಳಿ ಹೇಳಿದೆ.
ಮುಸ್ಲಿಂ ಮಹಿಳೆಯರು ನಮಾಝ್ ನಿರ್ವಹಿಸಲು ಮಸೀದಿ ಪ್ರವೇಶ ಕುರಿತ ಅರ್ಜಿಗೆ ಸಂಬಂಧಿಸಿ ಎಐಎಂಪಿಎಲ್’ಬಿ ಸುಪ್ರೀಂ ಕೋರ್ಟ್’ಗೆ ಸಲ್ಲಿಸಿದ ಅಫಿಡವಿತ್’ನಲ್ಲಿ ಈ ವಿಷಯ ತಿಳಿಸಿದೆ.
ಫರ್ಹಾ ಅನ್ವರ್ ಹುಸೇನ್ ಶೇಖ್ ಎಂಬವರು 2020 ರಲ್ಲಿ ಸುಪ್ರೀಂ ಕೋರ್ಟ್’ಗೆ ಅರ್ಜಿ ಸಲ್ಲಿಸಿ, ಭಾರತದ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಕ್ರಮಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ನಿರ್ದೇಶನ ನೀಡುವಂತೆ ಕೋರಿದ್ದರು. ಈ ಮನವಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ ನಲ್ಲಿ ಆಲಿಸುವ ಸಾಧ್ಯತೆಯಿದೆ.
ಎಐಎಂಪಿಎಲ್’ಬಿ ಎಂಬುದು ಯಾವುದೇ ಅಧಿಕಾರಗಳಿಲ್ಲದ ತಜ್ಞರ ಸಂಸ್ಥೆಯಾಗಿರುವುದರಿಂದ, ಇಸ್ಲಾಮಿಕ್ ತತ್ವಗಳ ಆಧಾರದ ಮೇಲೆ ಮಾತ್ರ ಸಲಹೆ, ಅಭಿಪ್ರಾಯವನ್ನು ನೀಡಬಹುದು ಅಷ್ಟೇ ಎಂದು ಅಫಿಡವಿಟ್’ನಲ್ಲಿ ತಿಳಿಸಲಾಗಿದೆ.
ಮುಸ್ಲಿಂ ಧರ್ಮ ಗ್ರಂಥಗಳಲ್ಲಿ ಮಹಿಳೆಯರು ಮಸೀದಿಗೆ ಬರಲು, ನಮಾಝ್ ಮಾಡಲು ಅವಕಾಶವಿದೆ. ಅದು ನಮ್ಮ ಅಭಿಪ್ರಾಯವೂ ಆಗಿದೆ. ಎಲ್ಲ ಮಸೀದಿಗಳಲ್ಲಿ ಮಹಿಳೆಯರ ನಮಾಜ್ಗೆ ಪ್ರತ್ಯೇಕ ಸ್ಥಳ ಇದೆ. ಇಲ್ಲದಲ್ಲಿ ಅಲ್ಲಿಯ ಧಾರ್ಮಿಕ ಮಂಡಳಿಗಳು ಪ್ರತ್ಯೇಕ ಸ್ಥಳಾವಕಾಶ ಮಾಡಿ ಕೊಡಬೇಕು ಎಂದು ಎಐಎಂಪಿಎಲ್’ಬಿ ಸೂಚಿಸಿದೆ.