➤ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಿ, ಅವರಿಗೆ ಸರಕಾರಿ ನೌಕರಿ ಶಾಶ್ವತವಾಗಿ ಬಂದ್ ಮಾಡಿ ಎಂದ ಎಚ್ ಡಿಕೆ
ಮೊಳಕಾಲ್ಮೂರು: ಪಿಎಸ್ ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಅಲ್ಲದೆ, ತಪ್ಪು ಮಾಡಿರುವ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಅವಕಾಶದಿಂದ ಸಂಪೂರ್ಣವಾಗಿ ದೂರ ಇಡಬೇಕು ಎಂದು ಅವರು ತಿಳಿಸಿದರು.
ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು ಕೇಳುತ್ತಿರುವುದರಲ್ಲಿ ನ್ಯಾಯ ಇದೆ. ಈಗ ಯಾರು ಹಣ ಕೊಟ್ಟು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ, ಅಕ್ರಮವೆಸಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಸರಕಾರಕ್ಕೆ ಸಿಗುತ್ತದೆ. ಅಕ್ರಮ ಎಸಗಿದವರನ್ನು ಹೊರತುಪಡಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ಅಭ್ಯರ್ಥಿಗಳನ್ನು ಯಾಕೆ ಬೀದಿಪಾಲು ಮಾಡುತ್ತೀರಾ? ಎಂದು ಪ್ರಶ್ನಿಸಿದರು.
ಪರೀಕ್ಷೆಯನ್ನು ಸರಿಯಾಗಿ ನಡೆಸದೆ ಸರಕಾರ ಲೋಪ ಎಸಗಿದೆ. ಇದು ಸರಕಾರದ ತಪ್ಪು ಹಾಗೂ ವೈಫಲ್ಯ. ವಸ್ತು ಸ್ಥಿತಿ ಹೀಗಿರಬೇಕಾದರೆ ಪ್ರಾಮಾಣಿಕರಿಗೆ ಯಾಕೆ ಶಿಕ್ಷೆ ಕೊಡುತ್ತೀರಾ? ಅವರು ಏನು ತಪ್ಪು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರದ ವಿರುದ್ದ ಹರಿಹಾಯ್ದರು.
ನಾನು ನಿನ್ನೆ ಬೆಳಗ್ಗೆ ಪತ್ರಿಕೆಯಲ್ಲಿ ಓದುತಿದ್ದೆ, ಒಬ್ಬ ಅಭ್ಯರ್ಥಿಯ ತಾಯಿಗೆ ಒಂದೂವರೆ ಸಾವಿರ ರು. ಪೆನ್ಷನ್ ಬರುತ್ತದೆ. ಆ ಹಣದಲ್ಲಿ ನಮ್ಮ ಕುಟುಂಬ ಬದುಕುತ್ತಿದೆ. ನಾನು ಬಿಇ ಮೆಕ್ಯಾನಿಕಲ್ ಮಾಡಿದ್ದೇನೆ, ಈಗ ಪರೀಕ್ಷೆ ರದ್ದು ಮಾಡಿ ಪುನಾ ಪರೀಕ್ಷೆ ಬರೆಯಬೇಕು ಎಂದರೆ ಹೇಗೆ? ನಾನು ಹಣ ಕೊಟ್ಟು ಪಾಸು ಮಾಡಿಸಿಕೊಂಡಿಲ್ಲ ಎಂದು ತನ್ನ ಕುಟುಂಬ ಪರಿಸ್ಥಿತಿಯನ್ನು ಅಳುತ್ತಾ ಹೇಳುತ್ತಾನೆ. ಹೀಗೆ ನೂರಾರು ಅಭ್ಯರ್ಥಿಗಳ ಜೀವನದ ಜತೆ ಸರಕಾರ ಆಟವಾಡುತ್ತಿದೆ. ಈಗ ನೋಡಿದರೆ ತನಿಖಾ ವರದಿಯನ್ನೇ ಸಂಪೂರ್ಣವಾಗಿ ಕೈಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಬಾರದು. ಈ ಹಿಂದೆ 2011ರ ಕೆಪಿಎಸ್ಸಿ ಪರೀಕ್ಷೆಯನ್ನು ಅಂದಿನ ಸರಕಾರ ಹೇಗೆ ಹಾಳು ಮಾಡಿತ್ತು ಎಂದು ದೂರಿದರು.
ಪರೀಕ್ಷೆಯಲ್ಲಿ ಯಾರು ಅಕ್ರಮ ಎಸಗಿದ್ದಾರೆ ಎಂದು ಮೊದಲು ಪತ್ತೆ ಹಚ್ಚಿ. ಅಂತವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಬಯಲಿಗೆ ಎಳೆಯಿರಿ. ಅಕ್ರಮವಾಗಿ ಪರೀಕ್ಷೆ ಬರೆದು ಪಾಸಾದವರನ್ನು ಸಂಪೂರ್ಣವಾಗಿ ಮುಂದಿನ ಯಾವುದೇ ಸರಕಾರಿ ನೌಕರಿಗೆ ಅರ್ಹರಲ್ಲ ಎಂದು ಆದೇಶ ಹೊರಡಿಸಿ. ಯಾರು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆಯೋ ಅವರ ಜೀವನದ ಜತೆ ಚಲ್ಲಾಟವಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಕಿವಿಮಾತು ಹೇಳಿದರು.
ಅಧಿಕಾರ ಸಿಕ್ಕಿದರೆ ನೀರು ಕೊಡುತ್ತೇವೆ:
ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ರಾಜ್ಯದ ಜನತೆ 5 ವರ್ಷಗಳ ಆಳ್ವಿಕೆಗೆ ಅವಕಾಶ ಕೊಟ್ಟರೆ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಯೋಜನೆಗಳ ಜಾರಿಗೆ ಎಷ್ಟು ಕೋಟಿ ಹಣ ಖರ್ಚಾದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜನರಿಗೆ ನೀರನ್ನು ಒದಗಿಸುವುದೇ ನಮ್ಮ ಸಂಕಲ್ಪ. ಅದಕ್ಕಾಗಿ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ನಿನ್ನೆ ಜಗಳೂರಿನಲ್ಲಿ ಮುಖ್ಯಮಂತ್ರಿ ಕೆಲ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದಾರೆ. ಆದರೆ, ನಾನು ಮುಖ್ಯಮಂತ್ರಿ ಆಗಿದ್ದಾಗ ಜಗಳೂರು ಭಾಗಕ್ಕೆ ನಿರು ಕೊಡಲು, ಕೆರೆ ತುಂಬಲು ಯೋಜನೆ ರೂಪಿಸಿದ್ದೆ. ಅದಕ್ಕೆ ಬಿಜೆಪಿ ಈಗ ಅಡಿಗಲ್ಲು ಹಾಕಲು ಹೊರಟಿದೆ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ
ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿ ರಾಜ್ಯಕ್ಕೆ 75 ವರ್ಷಗಳಿಂದ ನಿರಂತರ ಅನ್ಯಾಯ ಆಗಿದೆ. ದೇವೇಗೌಡರು ಪ್ರಧಾನಿ ಆಗಿದ್ದ ಸಂದರ್ಭವನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯ ಆಗಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಕೃಷ್ಣಾ ನದಿ ಯೋಜನೆಯನ್ನು ರಾಷ್ಟ್ರೀಯ ಯೊಜನೆ ಎಂದು ಘೋಷಿಸಿ ಎಂದು ರಾಜ್ಯ ಸರಕಾರ ಈಗ ಕೇಳುತ್ತಿದೆ. ಆದರೆ, ಕೇಂದ್ರವು ರಾಜ್ಯದ ಜತೆಗೆ ಹೇಗೆ ನಡೆದುಕೊಂಡಿದೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮುಂದೆ ಅನುಷ್ಠಾನಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಆಸಿಡ್ ದಾಳಿ ಆರೋಪಿಯನ್ನು ಬಿಡಬೇಡಿ
ತನ್ನ ಪ್ರೀತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ ಅಪರಾಧಿಯನ್ನು ಸುಮ್ಮನೆ ಬಿಡಬೇಡಿ ಎಂದು ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಆಗ್ರಹಪಡಿಸಿದರು.