Home ಟಾಪ್ ಸುದ್ದಿಗಳು ಲಾಕ್ ಡೌನ್ ಅಗತ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ

ಲಾಕ್ ಡೌನ್ ಅಗತ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ

ಬೆಂಗಳೂರು: ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್‍ ಕರ್ಪ್ಯೂ ಹೇರಲಾಗಿದ್ದರೂ ಲಾಕ್ ಡೌನ್ ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ.

ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿದ್ದು, ಒಮಿಕ್ರಾನ್ ಸೋಂಕು ಗಂಭೀರ ಸ್ವರೂಪದ್ದಲ್ಲದೆ ಇರುವುದರಿಂದ ಲಾಕ್ ಡೌನ್ ಮಾಡುವ ಅಗತ್ಯವಿಲ್ಲ ಎಂಬ ತಜ್ಞರ ಅಭಿಪ್ರಾಯವನ್ನು ಸರ್ಕಾರ ಒಪ್ಪಿಕೊಂಡಿದೆ ಎಂದಿವೆ.

ಒಮಿಕ್ರಾನ್ ಸೋಂಕು ತಗಲಿದವರು ನೆಗಡಿಯಂತಹ ಸಣ್ಣ,ಪುಟ್ಟ ತೊಂದರೆಗಳಿಗೆ ಒಳಗಾಗುತ್ತಿದ್ದಾರೆಯೇ ಹೊರತು ತುರ್ತು ನಿಗಾ ಘಟಕಕ್ಕೆ ಸೇರುವ ಪರಿಸ್ಥಿತಿಗೆ ತಲುಪುತ್ತಿಲ್ಲ ಎಂಬುದು ತಜ್ಞರ ಸಧ್ಯದ ವಿವರಣೆ.

ರಾಜ್ಯದಲ್ಲಿ ಒಮಿಕ್ರಾನ್ ತಗಲಿದ ಯಾರೊಬ್ಬರಿಗೂ ಪ್ರಾಣಹಾನಿಯಾಗುವಂತಹ ಅಪಾಯ ಎದುರಾಗಿಲ್ಲ.ಬದಲಿಗೆ ಮುನ್ನೆಚ್ಚರಿಕೆಯ ಕ್ರಮಗಳಿಂದ ಅವರು ಒಮಿಕ್ರಾನ್ ಸಮಸ್ಯೆಯಿಂದ ಹೊರಬರುತ್ತಿದ್ದಾರೆ.

ಇದುವರೆಗೆ ಒಮಿಕ್ರಾನ್ ತಗಲಿ ಸಾವಿಗೀಡಾದವರ ಪೈಕಿ ಆಸ್ಟ್ರೇಲಿಯಾದ ವ್ಯಕ್ತಿಗೆ ಎಂಭತ್ತು ವರ್ಷ ಮೀರಿತ್ತು.ಅದೇ ರೀತಿ ಹಲವು ಆರೋಗ್ಯದ ಸಮಸ್ಯೆಗಳಿದ್ದವು.ಇದೇ ರೀತಿ ಜಪಾನ್ನ್ ಮತ್ತೊಬ್ಬರು ಕೂಡಾ ಹಲವು ಕಾಯಿಲೆಗಳಿಂದ ನರಳುತ್ತಿದ್ದರು.

ಉಳಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕಾಣಿಸಿಕೊಂಡ ಒಮಿಕ್ರಾನ್ ಎಲ್ಲೂ ಉಗ್ರ ರೂಪ ತೋರಿಸಿಲ್ಲ. ವೈಜ್ಞಾನಿಕವಾಗಿ ಕೊರೋನಾ ಸೋಂಕು ಕೊನೆಗೊಳ್ಳುತ್ತಿರುವ ಆರಂಭಿಕ ಕಾಲಘಟ್ಟ ಇದು.ಹೀಗಾಗಿ ರೂಪಾಂತರಗೊಂಡ ತಳಿಯ ಶಕ್ತಿ ಕಡಿಮೆ.

ಇಷ್ಟಾದರೂ ಕೊರೋನಾ ತಳಿ ರೂಪಾಂತರಗೊಳ್ಳುತ್ತಲೇ ಇರುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸಬೇಕು.ಇದಕ್ಕಾಗಿ ನೈಟ್ ಕರ್ಪ್ಯೂನಂತಹ ಕ್ರಮಗಳ ಅಗತ್ಯವಿದೆಯೇ ಹೊರತು ಲಾಕ್ ಡೌನ್ ಅಲ್ಲ ಎಂಬುದು ತಜ್ಞರ ಅಭಿಮತ.

 ರಾತ್ರಿ ಹೊತ್ತು ಪಾರ್ಟಿಗಳ ಹೆಸರಿನಲ್ಲಿ,ಮತ್ತಿತರ ಕಾರಣಗಳ ಹೆಸರಿನಲ್ಲಿ ಜನ ಗುಂಪುಗೂಡುತ್ತಾರೆ. ಇದಕ್ಕೆ ಅವಕಾಶ ನೀಡುವುದು ಅಪಾಯಕಾರಿ ಎಂಬ ಕಾರಣಕ್ಕಾಗಿ ನೈಟ್ ಕರ್ಪ್ಯೂ ಅನಿವಾರ್ಯ.

ಬಹುತೇಕ ಫೆಬ್ರವರಿ ತಿಂಗಳ ತನಕ ಇಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಒಮಿಕ್ರಾನ್ ಹೇಳಿಕೊಳ್ಳುವಂತಹ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ ಎಂದು ತಜ್ಞರು ಸರ್ಕಾರಕ್ಕೆ ಹೇಳಿದ್ದು,ಅವರ ಈ ಶಿಫಾರಸೇ ನೈಟ್ ಕರ್ಪ್ಯೂ ಹೇರಿಕೆಗೆ ಕಾರಣ.

ಸರ್ಕಾರದ ಮೂಲಗಳ ಪ್ರಕಾರ,ಹೊಸ ವರ್ಷಾಚರಣೆಯ ನೆಪದಲ್ಲಿ ಜನ ಗುಂಪುಗೂಡುವ ಚಾಳಿ ಇರುವುದರಿಂದ ಅದನ್ನು ತಡೆಗಟ್ಟುವುದು ಅನಿವಾರ್ಯವಾಗಿತ್ತು.ಈ ಹಿನ್ನಲೆಯಲ್ಲಿ ನೈಟ್ ಕರ್ಪ್ಯೂ ಪರಿಣಾಮಕಾರಿ ಮಾರ್ಗ.

ಇನ್ನು ಒಮಿಕ್ರಾನ್ ಪ್ರಭಾವ ಕಡಿಮೆಯಿದ್ದರೂ ಕೊರೋನಾ ತಳಿ ರೂಪಾಂತರಗೊಳ್ಳುತ್ತಲೇ ಇರುವ ಕಾರಣಕ್ಕಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಕ್ಕಳಿಗೆ ವ್ಯಾಕ್ಸಿನ್ ಕೊಡಲು ತೀರ್ಮಾನಿಸಲಾಗಿದೆ.

ಹೀಗೆ ಎಲ್ಲ ಬಗೆಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡರೆ ಅನುಮಾನವೇ ಬೇಡ,ಮುಂದಿನ ಕೆಲ ತಿಂಗಳಲ್ಲಿ ಕೊರೋನಾ ಮತ್ತದರ ರೂಪಾಂತರ ತಳಿಗಳು ನಾಶವಾಗುತ್ತವೆ ಎಂಬುದು ತಜ್ಞರ ಸದ್ಯದ ಮಾಹಿತಿ.

Join Whatsapp
Exit mobile version