Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ: ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ: ಡಾ.ಕೆ.ಸುಧಾಕರ್

► ಓಮಿಕ್ರಾನ್ ಸೋಂಕು ಹೆಚ್ಚೇನೂ ಪರಿಣಾಮ ಬೀರದು

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವ ಪ್ರಸ್ತಾಪ ಇಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮೊದಲೇ ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಸಾವಿರಾರು ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಈಗೀಗ ವ್ಯಾಪಾರ ವಹಿವಾಟು ಚುರುಕುಗೊಳ್ಳುತ್ತಿದೆ. ಇಂತಹ ವೇಳೆಯಲ್ಲಿ ಅನಗತ್ಯವಾಗಿ ಗೊಂದಲ ಉಂಟು ಹಾಕುವುದು ಬೇಡ ಎಂದು ಹೇಳಿದರು.


ಕೊರೂನಾ ಹೊಸ ತಳಿಯ ಓಮಿಕ್ರಾನ್ ವೈರಾಣು ವಿವಿಧ ರಾಷ್ಟ್ರಗಳಲ್ಲಿ ಹಬ್ಬುತ್ತಿದೆ. ಕೋವಿಡ್ ಸೋಂಕು ತಡೆಯಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಲಾಕ್ ಡೌನ್ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ಗಮನಿಸಿದ್ದೇನೆ. ಸಾಮಾಜಿಕ ಜಾಲತಾಣ ಇರುವುದು ಉತ್ತಮ ಸಂದೇಶ ರವಾನಿಸಲು, ಇಂಥ ಕಡೆಗಳಲ್ಲಿ ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದು ಬೇಡ. ರಾಜ್ಯದಲ್ಲಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಕೊರೊನಾ ಮತ್ತು ಡೆಲ್ಟಾ ವೈರಸ್ ಸಾಕಷ್ಟು ಜೀವ ಹಾನಿ ಮಾಡಿದೆ. ಆದರೆ, ಈಗ ಕಾಣಿಸಿಕೊಳ್ಳುತ್ತಿರುವ ಸೋಂಕು ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆದರೂ ಜನರು ಮಾತ್ರ ಮೈಮರೆಯಬಾರದು. ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು.

ಕೋವಿಡ್ ರೂಪಾಂತರಿ ಸೋಂಕಿನ ಬಗ್ಗೆ ನಾಳೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ಕರೆಯಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಅವರನ್ನು ಕೂಡ ನಾಳೆಯ ಸಭೆಗೆ ಕರೆದಿದ್ದೇನೆ. ಅವರಿಂದ ಸಲಹೆ ಪಡೆಯುತ್ತೇನೆ ಎಂದು ಹೇಳಿದರು.

 ಹೊಸ ತಳಿ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ. ಈಗ 12 ದೇಶಗಳಲ್ಲಿ ಈ ತಳಿ ಕಂಡುಬಂದಿದೆ. ಅಂತಾರಾಷ್ಟ್ರೀಯ ವಿಮಾನಗಳು ಬರುತ್ತಿದ್ದು, ಬಹಳ ಎಚ್ಚರಿಕೆಯಿಂದ ಪರೀಕ್ಷೆ ‌ಮಾಡುತ್ತಿದ್ದೇವೆ. ವಿಮಾನದ ಮೂಲಕ ಈ ಹಿಂದೆ ಬಂದವರನ್ನು ತಪಾಸಣೆ ಮಾಡಿದ್ದೇವೆ. ದ. ಆಫ್ರಿಕಾದ ವೈದ್ಯರ ಜೊತೆ ಕೂಡ ಮಾತುಕತೆ ನಡೆಸಲಾಗಿದೆ. ಬಹಳ ಬೇಗವಾಗಿ ಈ ವೈರಸ್ ಹರಡುತ್ತಿದೆ. ಆದರೆ ಬಹಳ ಭೀಕರವಾಗಿ ಈ ವೈರಸ್ ಹರಡುತ್ತಿಲ್ಲ. ವಾಂತಿ, ಸುಸ್ತು ಈ ವೈರಸ್ ನ ಗುಣಲಕ್ಷಣಗಳು. ಆಯಾಸ ಆಗುವ‌ ಲಕ್ಷಣ ಇದರಲ್ಲಿ ಇಲ್ಲ. ಡೇಲ್ಟಾ ಹೊಲಿಕೆ ಮಾಡಿದರೆ ವೇಗವಾಗಿ ಇದು ಹರಡುವುದಿಲ್ಲ. ಹಾಗಾಗಿ ‌ನಾವೆಲ್ಲ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.

ಆಫ್ರಿಕಾದಿಂದ ಬಂದ 36 ವರ್ಷದ ಪ್ರಜೆಯಲ್ಲಿ ಡೆಲ್ಟಾ ಗಿಂತ ಭಿನ್ನವಾದ ಲಕ್ಷಣ ಕಂಡುಬಂದಿದೆ.  ಕೇಂದ್ರ ಆರೋಗ್ಯ ಇಲಾಖೆ ಮತ್ತು ICMR ಜೊತೆ ಚರ್ಚೆ ಮಾಡಿ ಈ ಬಗ್ಗೆ ಸಂಜೆ ಒಳಗೆ ಮಾಹಿತಿ ನೀಡುತ್ತೇನೆ ಎಂದು ಸಚಿವರು ತಿಳಿಸಿದರು.

ESI ಆಸ್ಪತ್ರೆಯಲ್ಲಿ 15 ತಿಂಗಳಿಂದ ಕೋವಿಡ್ ನಿಂದ ಮೃತರಾದ ಶವ ಇಟ್ಟುಕೊಂಡ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್, ಈ ಆಸ್ಪತ್ರೆ ಕಾರ್ಮಿಕ ಇಲಾಖೆಯಡಿ ಬರುತ್ತದೆ. ಆದರೂ  ನಾನು ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ESI ಆಸ್ಪತ್ರೆಯಲ್ಲಿ ಕೆಲವರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆ ಬಗ್ಗೆಯೂ ಸಂಬಂಧ ಪಟ್ಟವರ ಜೊತೆ ಚರ್ಚೆ ಮಾಡಿ ಕ್ರಮ‌‌ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

Join Whatsapp
Exit mobile version