ಬೆಂಗಳೂರು: ಇನ್ನು ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ ಮತ್ತು ಈಗಾಗಲೇ ದಾಖಲಾಗಿರುವ ಸೆಕ್ಷನ್ ಗಳ ಅಡಿಯಲ್ಲಿ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ತಾಕೀತು ಮಾಡಿದೆ.
ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತು.
ಕೋಮು ಗಲಭೆಯನ್ನು ಪ್ರಚೋದಿಸಿ ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ರದ್ದುಗೊಳಿಸುವಂತೆ ದೂರುದಾರ ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಹರೀಶ್ ಪೂಂಜಾ ಅವರ ವಿರುದ್ಧದ ಎಫ್ಐಆರ್ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕದಿದ್ದರೆ ಅವರು ಅಪರಾಧವನ್ನು ಪುನರಾವರ್ತಿಸುತ್ತಾರೆ. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುತ್ತಾರೆ ಮತ್ತು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಪಡೆಯುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಎಸ್. ಬಾಲನ್ ವಾದಿಸಿದರು.
ವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಆಗಸ್ಟ್ 07 ರವರೆಗೆ ತಡೆಯಾಜ್ಞೆಯನ್ನು ವಿಸ್ತರಿಸಿದರು ಮತ್ತು “ಅರ್ಜಿದಾರ ಹರೀಶ್ ಪೂಂಜಾ ಯಾವುದೇ ದ್ವೇಷ ಭಾಷಣವನ್ನು ಪುನರಾವರ್ತಿಸಲು ಅಥವಾ ಅವರ ವಿರುದ್ಧ ಈಗಾಗಲೇ ದಾಖಲಾಗಿರುವ ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಅಪರಾಧವನ್ನು ಪುನರಾವರ್ತಿಸಲು ಸಾಧ್ಯವಿಲ್ಲ” ಎಂದು ಆದೇಶಿಸಿದರು.
