ತುಮಕೂರು: ಪಠ್ಯದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸುವ ಮಾತಿಲ್ಲ. ಅದರ ಬದಲು ನೈತಿಕ ಶಿಕ್ಷಣ ಅಳವಡಿಸಲಾಗುವುದು’ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಇನ್ನು ಕೆಲ ನೈತಿಕ ಅಂಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡುವುದರೊಂದಿಗೆ ಜೀವನಕ್ಕೆ ಬೇಕಾದ ಶಿಕ್ಷಣವನ್ನು ನಾವು ಹೇಳಿಕೊಡುತ್ತೇವೆಯೇ ಹೊರತು, ಧಾರ್ಮಿಕ ರೀತಿಯಲ್ಲಿ ಹೇಳಿಕೊಡುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೈತಿಕ ಶಿಕ್ಷಣದಲ್ಲಿ ದೇವರ ಪೂಜೆ ಹೇಗೆ ಮಾಡೊದು ಹೇಳಿ ಕೊಡುವುದಿಲ್ಲ. ಜೀವನಕ್ಕೆ ಬೇಕಾದ ಶಿಕ್ಷಣ, ಮೌಲ್ಯಗಳನ್ನು ಅಳವಡಿಸುತ್ತೇವೆ’ ಎಂದರು. ಕುರಾನ್ ಮತ್ತು ಬೈಬಲ್‌ನಲ್ಲಿರುವ ನೈತಿಕತೆ ವಿಚಾರಗಳನ್ನು ಪಠ್ಯದಲ್ಲಿ ಸೇರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದರಲ್ಲಿ ನೈತಿಕ ಶಿಕ್ಷಣ ಇದೆಯೋ ಅದನ್ನು ಸೇರಿಸುತ್ತೇವೆ. ಆದರೆ, ಯಾರು ಶೇ 95ರಷ್ಟು ಇರುತ್ತಾರೊ ಅವರಿಗೆ ಬೇಕಾಗಿರುವುದನ್ನು ಕೊಡುತ್ತೇವೆಯೇ ಹೊರತು ಕೇವಲ ಶೇ 5ರಷ್ಟಿರುವ ಜನರಿಗೆ ಬೇಕಾದ್ದನ್ನು ಕೊಡಲು ಸಾಧ್ಯವಿಲ್ಲ.
ಒಂದು ವೇಳೆ ಹಾಗೆ ಮಾಡಿದರೆ ಶೇ 95ರಷ್ಟು ಜನ ಎದ್ದು ಹೊಗುತ್ತಾರೆ’ ಎಂದು ಸಮರ್ಥಿಸಿಕೊಂಡರು. ‘ನಾವು, ನೀವು ಓದುವಾಗ ನೈತಿಕ ಶಿಕ್ಷಣ ಇತ್ತು. ಇತ್ತೀಚೆಗೆ ಅದು ತಪ್ಪಿ ಹೋಗಿದೆ.ರಾಮಾಯಣ, ಮಹಾಭಾರತ ನಡೆದಿದೆಯೋ, ಇಲ್ಲವೊ ಗೊತ್ತಿಲ್ಲ. ಆದರೆ. ಅವು ಇಂದಿಗೂ ಹಳ್ಳಿಗಳಲ್ಲಿ ಪ್ರೇರಣೆಯಾಗಿದೆ. ಅದನ್ನು ಮುಂದಿನ ಪೀಳಿಗೆಗೆ ಏಕೆ ಕೊಡಬಾರದು. ಆ ರೀತಿಯ ನೈತಿಕ ಶಿಕ್ಷಣ ಪಠ್ಯದಲ್ಲಿ ಸೇರಿಸುತ್ತಿದ್ದೇವೆ’ ಎಂದರು