ಮುಂಬೈ: ದೀಪಾವಳಿಗೂ ಮುನ್ನ ಮುಂಬೈಯಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ ಹುಸಿಯಾಗಿದ್ದು, ನಗರ ಸುರಕ್ಷಿತವಾಗಿದೆ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಂಬೈ ಪೊಲೀಸರು ನಗರದಲ್ಲಿ ಬೆದರಿಕೆ ಕರೆಗಳನ್ನು ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ. ಬೆದರಿಕೆ ಕರೆಗಳ ಬಗ್ಗೆ ಪೊಲೀಸರು ಶುಕ್ರವಾರ ಹೇಳಿಕೆಯೊಂದನ್ನು ನೀಡಿದ್ದು, ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಇಂತಹ ಕರೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಡೀ ನಗರದಲ್ಲಿ ಬಿಗಿ ಬಂದೋಬಸ್ತ್ ಮತ್ತು ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ವಕೋಲಾದ ಗ್ರ್ಯಾಂಡ್ ಹಯಾತ್ ಹೋಟೆಲ್’ನಲ್ಲಿ ಬಾಂಬ್ ಸ್ಫೋಟದ ಬಗ್ಗೆ ಗುರುವಾರದಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ಪ್ರಕರಣದ ಆರೋಪಿಯನ್ನು ವಕೋಲಾ ಪೊಲೀಸರು ಬಂಧಿಸಿದ್ದು, ಕರೆ ಮಾಡಿದಾತ ಮಧ್ಯಪಾನ ಮಾಡಿದ್ದನು. ಈತ ಹಿಂದೆಯೂ ಇಂತಹ ಸುಳ್ಳು ಕರೆಗಳನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಆರೋಪಿ ಈ ಹಿಂದೆಯೂ ಮುಂಬೈ ವಿಶ್ವವಿದ್ಯಾಲಯಕ್ಕೆ ಬಾಂಬ್ ದಾಳಿ ನಡೆಸುವುದಾಗಿ ಕರೆ ಮಾಡಿದ್ದನು ಮತ್ತು ಆತನ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿತ್ತು.
ಇನ್ನೊಂದೆಡೆ ಮುಂಬೈನ ಹಲವು ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸುವ ಬಗ್ಗೆ ಮಂಗಳವಾರ ರಾತ್ರಿ ಮುಂಬೈ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ಫಿನಿಟಿ ಮಾಲ್ ಅಂಧೇರಿ, ಪಿವಿಆರ್ ಮಾಲ್ ಜುಹು ಮತ್ತು ಮುಂಬೈನ ಸಹಾರಾ ಹೋಟೆಲ್ ವಿಮಾನ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಫೋನ್’ನಲ್ಲಿ ಕರೆ ಮಾಡಿದವನು ಹೇಳಿಕೊಂಡಿದ್ದರು. ತಕ್ಷಣ ಭದ್ರತೆಯನ್ನು ಹೆಚ್ಚಿಸಲಾಯಿತು ಮತ್ತು ಸಿಐಎಸ್ಎಫ್, ಬಿಡಿಡಿಎಸ್ ಜೊತೆಗೆ ಸಹರ್ ಏರ್ ಪೋರ್ಟ್ ಪೊಲೀಸ್, ಜುಹು, ಅಂಬೋಲಿ ಮತ್ತು ಬಂಗೂರ್ ನಗರದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.
ಪದೇ ಪದೇ ಬರುತ್ತಿರುವ ಈ ಹುಸಿ ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಶುಕ್ರವಾರ ಹೇಳಿಕೆ ನೀಡಿದ್ದು, ನಗರದಲ್ಲಿ ಬಾಂಬ್ ಬೆದರಿಕೆಯ ಕುರಿತು ಯಾವುದೇ ಪರಿಸ್ಥಿತಿ ಇಲ್ಲ ಮತ್ತು ನಾಗರಿಕರು ಇಂತಹ ವದಂತಿಗಳಿಗೆ ಬಲಿಯಾಗದಂತೆ ವಿನಂತಿಸಿದ್ದಾರೆ. ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಕಿಡಿಗೇಡಿಗಳು ಬಾಂಬ್ ಸ್ಫೋಟದ ಕರೆಗಳನ್ನು ಮಾಡಲಾಗುತ್ತಿದ್ದು, ಈ ರೀತಿಯ ಭಯಾನಕ ಪರಿಸ್ಥಿತಿ ಮುಂಬೈನಲ್ಲಿ ಇಲ್ಲ. ಅಲ್ಲದೆ ಮುಂಬೈ ಪೊಲೀಸರು ಇಡೀ ನಗರಕ್ಕೆ ಭದ್ರತೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. “ಮುಂಬೈ ಪೊಲೀಸ್ ಪಡೆ ಸಮರ್ಥವಾಗಿದ್ದು, ನಾಗರಿಕರನ್ನು ರಕ್ಷಿಸಲು ಮತ್ತು ನಾಗರಿಕರು ದೀಪಾವಳಿಯನ್ನು ಮನಸ್ಸಿನ ಶಾಂತಿಯಿಂದ ಆಚರಿಸಲು ವಿನಂತಿಸಲಾಗಿದೆ, ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.