Home ಟಾಪ್ ಸುದ್ದಿಗಳು ಚಳಿಗಾಲದ ರಜೆಯಲ್ಲಿ ಯಾವುದೇ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ: CJI ಚಂದ್ರಚೂಡ್

ಚಳಿಗಾಲದ ರಜೆಯಲ್ಲಿ ಯಾವುದೇ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ: CJI ಚಂದ್ರಚೂಡ್

ನವದೆಹಲಿ: ಮುಂಬರುವ ಚಳಿಗಾಲದ ರಜೆಯಲ್ಲಿ ಯಾವುದೇ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ. ಆದರೆ ಅಗತ್ಯವಿದ್ದರೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದ್ದಾರೆ.

ನ್ಯಾಯಾಲಯಗಳು ಸುದೀರ್ಘ ರಜೆ ತೆಗೆದುಕೊಳ್ಳುವುದಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಆಕ್ಷೇಪಿಸಿದ್ದ ಬೆನ್ನಲ್ಲೇ ಸಿಜೆಐ ಅವರ ಈ ಹೇಳಿಕೆ ಹೊರಬಿದ್ದಿದೆ.

ಈ ವರ್ಷದ ಸೆಪ್ಟೆಂಬರ್ 29 ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಸುತ್ತೋಲೆಯಲ್ಲಿ, ಸುಪ್ರೀಂ ಕೋರ್ಟ್ ನ ಹಿರಿಯ ರಿಜಿಸ್ಟ್ರಿ ಅಧಿಕಾರಿಯನ್ನು ವಿಶೇಷವಾಗಿ ‘ರಜಾ ಅಧಿಕಾರಿ’ಯಾಗಿ ನಿಯೋಜಿಸಲಾಗಿದೆ. ಈ ಅಧಿಕಾರಿಯನ್ನು ಯಾವುದೇ ವಕೀಲರು ನ್ಯಾಯಾಲಯದ ರಜಾ ದಿನಗಳಲ್ಲಿ ಅಥವಾ ನ್ಯಾಯಾಲಯದ ನಂತರದ ಸಮಯದಲ್ಲಿ ತುರ್ತು ಪರಿಹಾರವನ್ನು ಕೋರಿ ಸಂಪರ್ಕಿಸಬಹುದು. ಅಂತಹ ಸಂದರ್ಭಗಳಲ್ಲಿ, ಅಗತ್ಯವಿದ್ದರೆ, ತುರ್ತು ರಜಾಕಾಲೀನ ಪೀಠವೊಂದನ್ನು ಸಿಜೆಐ ರಚಿಸುತ್ತಾರೆ  ಎಂದು ತಿಳಿಸಲಾಗಿತ್ತು.

ಅದರಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ರಜೆಯ ಅವಧಿಯಲ್ಲಿಯೂ ಇಂತಹ ಪೀಠಗಳ ನೇತೃತ್ವವಹಿಸಲು ಲಭ್ಯರಿರುತ್ತಾರೆ ಎಂದು ಸಿಜೆಐ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಗೆ ಡಿಸೆಂಬರ್ 19ರಿಂದ ಎರಡು ವಾರಗಳ ಕಾಲ ರಜೆ ಇರಲಿದ್ದು ಜನವರಿ 2ರಿಂದ ನ್ಯಾಯಾಲಯ ಮತ್ತೆ ಕಾರ್ಯಪ್ರವೃತ್ತವಾಗಲಿದೆ.

ರಿಜಿಜು ಅವರು ಗುರುವಾರ ಸಂಸತ್’ನಲ್ಲಿ “ನ್ಯಾಯಾಲಯಗಳ ಸುದೀರ್ಘ ರಜೆಯು ಕಕ್ಷಿದಾರರಿಗೆ ಹೆಚ್ಚು ಅನುಕೂಲಕರವಾಗಿಲ್ಲ ಎಂಬ ಭಾವನೆ ದೇಶದ ಜನರಲ್ಲಿದೆ. ಈ ಸದನದ ಸಂದೇಶ ಅಥವಾ ಭಾವನೆಯನ್ನು ನ್ಯಾಯಾಂಗಕ್ಕೆ ತಿಳಿಸುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ” ಎಂದಿದ್ದರು.

Join Whatsapp
Exit mobile version