ವಾಷಿಂಗ್ಟನ್: ‘ಭಾರತವು ಹಿಂದೂ ರಾಷ್ಟ್ರವಾಗುವ ಅಪಾಯದಲ್ಲಿದೆ’ ಎಂದು ‘ಅಜೀವಕಾಲ ಮಾನವಹಕ್ಕುಗಳ ಹೋರಾಟಗಾರ’ ಡೆಮಾಕ್ರಾಟ್ ಪಕ್ಷದ ನಿರ್ಗಮಿತ ಸದಸ್ಯ ಆ್ಯಂಡಿ ಲೆವಿನ್ ಹೇಳಿದ್ದಾರೆ.
ಗುರುವಾರ ಅಮೆರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ತಮ್ಮ ಅಧಿಕಾರವಧಿಯ ಕೊನೆಯ ಭಾಷಣ ಮಾಡಿದ ಆ್ಯಂಡಿ ಲೆವಿನ್, ಭಾರತದಲ್ಲಿ ಹುಟ್ಟಿದ ಹಿಂದೂ, ಜೈನ, ಬೌದ್ಧ ಧರ್ಮದ ಮತ್ತು ಇತರ ಧರ್ಮಗಳ ಅಭಿಮಾನಿ ನಾನು, ನಾವು ಇಲ್ಲಿನ ಎಲ್ಲಾ ಜನರ – ಅವರು ಮುಸ್ಲಿಮರಾಗಿರಲಿ, ಹಿಂದುಗಳಾಗಿರಲಿ, ಬೌದ್ಧ, ಯಹೂದಿಗಳು, ಕ್ರೈಸ್ತರು ಅಥವಾ ಜೈನರಾಗಿರಲಿ, ಅವರ ಹಕ್ಕುಗಳನ್ನು ರಕ್ಷಿಸಬೇಕಿದೆ. ಮಾನವ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಅಮೆರಿಕ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ ಎಂದು ಹೇಳಿದರು.
‘ಭಾರತದಂತಹ ದೇಶಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ನಾನು ಎಂದಿಗೂ ಧ್ವನಿ ಎತ್ತುತ್ತೇನೆ. ಭಾರತವು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗುವ ಬದಲಿಗೆ ಹಿಂದೂ ರಾಷ್ಟ್ರವಾಗುವ ಅಪಾಯದಲ್ಲಿದೆ’ ಎಂದು ಟೀಕಿಸಿದರು.
ಭಾರತದಲ್ಲಿ ಬಿಜೆಪಿ ಆಡಳಿತದಡಿಯಲ್ಲಿ ಕಾಶ್ಮೀರ ಸಮಸ್ಯೆ ಮತ್ತು ಮುಸ್ಲಿಮರ ಸಮಸ್ಯೆಯ ಬಗ್ಗೆ ಲೆವಿನ್ ಹಲವು ಬಾರಿ ಮಾತನಾಡಿದ್ದಾರೆ.