ದೆಹಲಿ : ಕಳೆದ ವರ್ಷ ಕೋವಿಡ್ ವೇಳೆ ಮಾಧ್ಯಮಗಳ ಪೂರ್ವಾಗ್ರಹಪೀಡಿತ ವರದಿಗಳಿಗೆ ಪೂರಕವಾಗಿ ಮುಚ್ಚಲಾಗಿದ್ದ ದೆಹಲಿ ನಿಝಾಮುದ್ದೀನ್ ಮರ್ಕಝ್ ಮಸೀದಿಯನ್ನು ಪ್ರಾರ್ಥನೆಗಳಿಗಾಗಿ ತೆರೆಯಲು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ದೆಹಲಿ ವಕ್ಫ್ ಬೋರ್ಡ್ ಚೇರ್ಮನ್ ಆಗಿರುವ ಆಪ್ ಪಕ್ಷದ ಓಕ್ಲಾ ಕ್ಷೇತ್ರದ ಶಾಸಕನಾಗಿರುವ ಅಮಾನತುಲ್ಲಾ ಖಾನ್ ಟ್ವೀಟ್ ಮಾಡಿದ್ದು, “ಬಂಗ್ಲೇವಾಲಿ ಮಸೀದಿ ಅಥವಾ ಮರ್ಕಝ್ ನಿಝಾಮುದ್ದೀನ್ ಕೇಂದ್ರವನ್ನು ತೆರೆಯಲು ಅನುಮತಿ ಕೋರಿ ನಾನು ಹಾಕಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ದೆಹಲಿ ಹೈಕೋರ್ಟ್, ಸಕಾರಾತ್ಮಕವಾಗಿ ಆದೇಶ ನೀಡಿದೆ. ಕೋವಿಡ್ ಶಿಷ್ಟಾಚಾರಗಳನ್ನು ಪಾಲನೆ ಮಾಡಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೂಡಾ ಅವಕಾಶ ನೀಡಲಾಗಿದೆ” ಎಂದು ಟ್ವೀಟಿನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ದೇಶದಲ್ಲಿ ಕೋವಿಡ್ ವ್ಯಾಪಕವಾಗಿದ್ದ ಸಮಯದಲ್ಲಿ ದೆಹಲಿಯ ಮರ್ಕಝ್ ನಿಝಾಮುದ್ದೀನ್ ಮಸೀದಿಯಲ್ಲಿ ವಿದೇಶಿಗಳು ಸೇರಿದಂತೆ ಹಲವು ತಬ್ಲೀಗಿ ಜಮಾತ್ ಸದಸ್ಯರು ಸಭೆ ಸೇರಿದ್ದರು. ಇದನ್ನೇ ನೆಪವಾಗಿಸಿರಿಸಿದ್ದ ಇಲ್ಲಿನ ಕೆಲ ಪೂರ್ವಾಗ್ರಹಪೀಡಿತ ಮಾಧ್ಯಮಗಳು ಇಡೀ ದೇಶದಲ್ಲಿ ಕೋವಿಡ್ ಹರಡಿದ್ದೇ ತಬ್ಲೀಗಿಗಳು ಎನ್ನುವ ರೀತಿಯಲ್ಲಿ ವರದಿ ಮಾಡಿದ್ದವು. ಆ ಬಳಿಕ ಬಂದ ನ್ಯಾಯಾಲಯಗಳ ಪ್ರತಿಯೊಂದು ತೀರ್ಪುಗಳು ತಬ್ಲೀಗಿಗಳ ಕುರಿತಾಗಿ ಮಾಧ್ಯಮಗಳ ಹರಡಿದ್ದ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸಾಬೀತುಪಡಿಸಿದ್ದವು.