ಕಾಶ್ಮೀರ: ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಜಮಾಅತ್ ಎ ಇಸ್ಲಾಮಿ ಅಂಗಸಂಸ್ಥೆಯಾದ ಅಲ್-ಹುದಾ ಎಜ್ಯುಕೇಷನಲ್ ಟ್ರಸ್ಟ್ ಅನ್ನು ಗುರಿಯಾಗಿಸಿ NIA ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಮಂಗಳವಾರ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ರಾಜೌರಿ, ಪೂಂಚ್, ಜಮ್ಮು, ಶ್ರೀನಗರ, ಪುಲ್ವಾಮ, ಬುದ್ಗಾಮ್, ಶೋಪಿಯಾನ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ NIA ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಭಯೋತ್ಪಾದನಾ ಚಟುವಟಿಕೆಗೆ ನಿಧಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಜಮಾಅತ್ ಎ ಇಸ್ಲಾಮಿಗೆ ಸೇರಿದ ಅಲ್-ಹುದಾ ಎಜ್ಯುಕೇಷನ್ ಸಂಸ್ಥೆಯ ಜಮ್ಮು, ಕಾಶ್ಮೀರದ ರಜೌರಿಯಲ್ಲಿರುವ ಕಚೇರಿಗಳ ವಿರುದ್ಧ NIA ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿದ್ದಾರೆ.
ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವೇದಿಕೆಯಾದ ಜಮಾಅತ್ ಎ ಇಸ್ಲಾಮಿ ಸಂಘಟನೆಯನ್ನು ಭಯೋತ್ಪಾದನೆಯ ಸಂಘಟನೆಯೊಂದಿಗೆ ನಂಟಿನ ಆರೋಪ ಹೊರಿಸಿ 2019 ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ನಿಷೇಧ ಹೇರಿತ್ತು.
ಅಲ್ಲದೆ ಕಳೆದ ತಿಂಗಳು ಜಮ್ಮು, ಕಾಶ್ಮೀರದ ರಾಜ್ಯ ಪೊಲೀಸರ ತನಿಖಾ ಸಂಸ್ಥೆಯು, ನಿಷೇಧಿತ ಜಮಾಅತ್ ಎ ಇಸ್ಲಾಮಿ ಮತ್ತು ಅದರ ಅಂಗಸಂಸ್ಥೆ ಫಲಾಹ್ ಎ ಆಮ್ ಟ್ರಸ್ಟ್ ಒಡೆತನದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಜಮಾಅತ್ ಎ ಲ್ಯಾಪ್’ಟ್ಯಾಪ್, ಪಾಸ್ ಬುಕ್, ಚೆಕ್ ಬುಕ್ ಮತ್ತು ಭೂ ದಾಖಲೆ ಪತ್ರ ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.