ಚಿಕ್ಕಮಗಳೂರು : ಹಣದ ವಿಚಾರಕ್ಕೆ ಸಂಬಂಧಿಸಿ ಕಾಫಿ ಎಸ್ಟೇಟ್ ಮಾಲೀಕನೊಬ್ಬ ದಲಿತ ಸಮುದಾಯದ 14 ಮಂದಿ ಕೂಲಿ ಕಾರ್ಮಿಕ ಮಹಿಳೆಯರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಅವರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಕೊಪ್ಪ ತಾಲೂಕಿನ ಹುಣಸೆ ಎಸ್ಟೇಟ್ ನಲ್ಲಿ ನಡೆದಿದೆ.
ಎಸ್ಟೇಟ್ ಮಾಲೀಕನನ್ನು ಬಿಜೆಪಿ ಸ್ಥಳೀಯ ಮುಖಂಡ ಜಗದೀಶ್ ಗೌಡ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು, ವೀಡಿಯೋದಲ್ಲಿ ಬೀಗ ಹಾಕಿದ ಮನೆಯೊಂದರೊಳಗೆ ಕಾರ್ಮಿಕ ಮಹಿಳೆಯರು ಇರುವ ದೃಶ್ಯಗಳು ಕಂಡುಬಂದಿದೆ. ಅಲ್ಲದೆ ಗರ್ಭಿಣಿಯೊಬ್ಬರ ಮೇಲೆ ಹಲ್ಲೆ ಮಾಡುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿವೆ.
ವಿಷಯ ತಿಳಿಯುತ್ತಿದ್ದಂತೆ ದೌರ್ಜನ್ಯಕ್ಕೆ ಒಳಗಾದ ಎಲ್ಲ ದಲಿತ ಕಾರ್ಮಿಕ ಮಹಿಳೆಯರನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಅಕ್ಟೋಬರ್ 8ರಂದು ನಡೆದಿದ್ದು, ಸದ್ಯ ಕೂಲಿ ಕಾರ್ಮಿಕ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಅವರು ನೀಡಿದ ದೂರು ಅಧರಿಸಿ ಎಸ್ಟೇಟ್ ಮಾಲೀಕರಾದ ಜಗದೀಶ್ ಮತ್ತು ತಿಲಕ್ ಎಂಬವರ ವಿರುದ್ಧ ಎಸ್ಸಿ ಎಸ್ ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದ್ದಾರೆ.