ಮಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡವೊಂದು ನಗರದ ಹೊರವಲಯದ ಉಳ್ಳಾಲದ ನಿವಾಸಕ್ಕೆ ದಾಳಿ ನಡೆಸಿ, ಇಡೀ ದಿನದ ವಿಚಾರಣೆಯ ಬಳಿಕ ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬುಧವಾರ ನಡೆದಿದೆ.
ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿಯಾಗಿರುವ ಬಿ. ಎಂ. ಬಾಷಾ ಅವರ ನಿವಾಸಕ್ಕೆ ಸುಮಾರು 20 ಮಂದಿಯ NIA ತಂಡ ಮುಂಜಾನೆ 5.30ಕ್ಕೆ ಭೇಟಿ ನೀಡಿ, ಸಂಜೆಯವರೆಗೆ ವಿಚಾರಣೆ ನಡೆಸಿದೆ. ಬಳಿಕ ಸಂಜೆ ಬಾಷಾ ಅವರ ಕಿರಿಯ ಪುತ್ರ ಅಮ್ಮಾರ್ ಎಂಬಾತನನ್ನು ಹೆಚ್ಚಿನ ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿದೆ.
ಆತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಬೆಂಗಳೂರು ಅಥವಾ ದಿಲ್ಲಿಗೆ ಕರೆದೊಯ್ಯಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ NIA ಅಥವಾ ಸ್ಥಳೀಯ ಪೊಲೀಸರು ಯಾವುದೇ ಅಧಿಕೃತ ಪ್ರಕಟಣೆ ಅಥವಾ ಹೇಳಿಕೆಗಳನ್ನು ಈವರೆಗೆ ನೀಡಿಲ್ಲ.
ತನಿಖೆಗೆ ಸಂಪೂರ್ಣ ಸಹಕಾರ: ಕುಟುಂಬ
‘‘ಇಂದು ಮುಂಜಾನೆ ಸುಮಾರು 5.30ರ ಹೊತ್ತಿಗೆ 30ಕ್ಕೂ ಅಧಿಕವಿದ್ದ ತನಿಖಾ ತಂಡ ನನ್ನ ಮನೆಗೆ ಆಗಮಿಸಿತ್ತು. ಸುಮಾರು ನಾಲ್ಕು ವರ್ಷದ ಹಿಂದೆ ಹಠಾತ್ತನೆ ನಾಪತ್ತೆಯಾಗಿದ್ದ ನನ್ನ ಮೊಮ್ಮಗಳು ಮತ್ತು ಆಕೆಯ ಪತಿಗೆ ಸಂಬಂಧಿಸಿ ವಿಚಾರಣೆ ನಡೆಸುವುದಕ್ಕಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾನು ಅವರು ಕೇಳಿದ ಪ್ರಶ್ನೆಗಳಿಗೆ ನನಗೆ ಗೊತ್ತಿರುವ ಎಲ್ಲ ಮಾಹಿತಿಗಳನ್ನು ನೀಡಿದ್ದೇನೆ’’ ಎಂದು ಕುಟುಂಬದ ಹಿರಿಯರಾಗಿರುವ ಅಬ್ದುಲ್ ರಹ್ಮಾನ್ ಬಾಷಾ ಅವರು ತಿಳಿಸಿದ್ದಾರೆ.
‘‘ಬೆಳಗ್ಗೆಯಿಂದ ಸಂಜೆಯವರೆಗೂ ನಮ್ಮ ಮನೆಯಲ್ಲೇ ಇದ್ದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮೊಬೈಲ್‌ಗಳನ್ನು ತಪಾಸಣೆ ನಡೆಸಿ, ಕೆಲವು ವೀಡಿಯೋಗಳ ಬಗ್ಗೆ ಪ್ರಶ್ನಿಸಿದ್ದರು. ಅವುಗಳ ಕುರಿತಂತೆಯೂ ನಾವು ಉತ್ತರಗಳನ್ನು ನೀಡಿದ್ದು, ಅವರ ಅನುಮಾನಗಳನ್ನು ಪರಿಹರಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.
‘‘ಇದೇ ಸಂದರ್ಭದಲ್ಲಿ ನನ್ನ ಕಿರಿಯ ಪುತ್ರನ ಮೊಬೈಲ್‌ಗಳನ್ನು ಪರಿಶೀಲಿಸಿದ್ದು ಕೆಲವು ವೀಡಿಯೋಗಳ ಕುರಿತಂತೆ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಆತನೂ ಉತ್ತರಿಸಿದ್ದಾನೆ. ಬಳಿಕ ‘ಈತನನ್ನು ನಾವು ನ್ಯಾಯಾಲಯಕ್ಕೆ ಹಾಜರು ಪಡಿಸಿ, ದಿಲ್ಲಿಗೆ ಕರೆದೊಯ್ದು ಹತ್ತು ದಿನಗಳ ‘ಕೌನ್ಸೆಲಿಂಗ್’ ನಡೆಸುತ್ತೇವೆ. ನಿರಪರಾಧಿ ಎಂದು ಕಂಡು ಬಂದರೆ ವಾಪಾಸ್ ಕಳುಹಿಸುತ್ತೇವೆ ಎಂದು ನಮಗೆ ತಿಳಿಸಿದರು’’ ಎಂದು ಅಬ್ದುರ್ರಹ್ಮಾನ್ ಅವರು ವಿವರಿಸಿದರು.