Home ಟಾಪ್ ಸುದ್ದಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿ ತೀವ್ರ ದಿಗ್ಭ್ರಮೆ ತಂದಿದೆ: ಕುಮಾರಸ್ವಾಮಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿ ತೀವ್ರ ದಿಗ್ಭ್ರಮೆ ತಂದಿದೆ: ಕುಮಾರಸ್ವಾಮಿ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಅಥವಾ ಫೇಲಾದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ನಡೆಸಿರುವ ಸುದ್ದಿ ನನಗೆ ದಿಗ್ಭ್ರಮೆ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಅಂಕವೇ ಎಲ್ಲವೂ ಅಲ್ಲ. ಪಾಸು-ಫೇಲು ಸಾಮಾನ್ಯ. ಜೀವನದಲ್ಲೂ ಏಳುಬೀಳು ಇದ್ದೇ ಇರುತ್ತದೆ. ಕಡಿಮೆ ಅಂಕ ಬಂದವರು ಮುಂದಿನ ತರಗತಿಯಲ್ಲಿ ಉತ್ತಮ ಅಂಕ ಪಡೆಯಲು ಯತ್ನಿಸಬೇಕು. ಫೇಲಾದವರು ಪಾಸಾಗಲು ಶ್ರಮಿಸಬೇಕು. ಅದನ್ನು ಬಿಟ್ಟು ಅಂಕಕ್ಕಾಗಿ ಜೀವವನ್ನೇ ಅಂತ್ಯ ಮಾಡಿಕೊಳ್ಳುವುದು ಹೆತ್ತವರಿಗೆ ಮಾಡುವ ಅನ್ಯಾಯ ಎಂದರು.

ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷಾ ಹಂತಗಳು ಇರುವಂತೆಯೇ ಬದುಕಿನುದ್ದಕ್ಕೂ ಅಗ್ನಿಪರೀಕ್ಷೆಗಳೇ ಇರುತ್ತವೆ. ಅವನ್ನು ಧೈರ್ಯ, ಛಲದಿಂದ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಪೋಷಕರು, ಬೋಧಕರು, ಶಿಕ್ಷಣ ಸಂಸ್ಥೆಗಳು & ಶಿಕ್ಷಣ ಇಲಾಖೆ ಮನದಟ್ಟು ಮಾಡಿಸಬೇಕು ಎಂದು ಅವರು ಸಾಂದರ್ಭಿಕವಾಗಿ ತಿಳಿಸಿದ್ದಾರೆ.

ವಿದ್ಯಾಭ್ಯಾಸದಲ್ಲಿ ಹಿಂದುಳಿದ ಅನೇಕರು ಉನ್ನತ ಸ್ಥಾನಗಳಿಗೆ ಹೋಗಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಹೀಗಾಗಿ ಧೃತಿಗೆಡಬೇಕಿಲ್ಲ. ಪೋಷಕರು ಕೂಡ ಮಕ್ಕಳಿಗೆ ಧೈರ್ಯ ತುಂಬಬೇಕು, ಸೂಕ್ಷ್ಮ ಮನಸ್ಸಿನ ಅವರಿಗೆ ಅಕ್ಕರೆಯಿಂದ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಮನವಿ ಮಾಡಿದ್ದಾರೆ.

Join Whatsapp
Exit mobile version