Home ಟಾಪ್ ಸುದ್ದಿಗಳು ನೆಲ್ಲೀ ಹತ್ಯಾಕಾಂಡ: 40 ವರ್ಷಗಳಲ್ಲಿ ಸಿಗದ ನ್ಯಾಯ

ನೆಲ್ಲೀ ಹತ್ಯಾಕಾಂಡ: 40 ವರ್ಷಗಳಲ್ಲಿ ಸಿಗದ ನ್ಯಾಯ

10,000 ಮಂದಿಯನ್ನು ಕೊಂದ ಒಬ್ಬರಿಗೂ ಶಿಕ್ಷೆಯಾಗಿಲ್ಲ


ಗುವಾಹಟಿ: ಆಕೆಯ ಮಗು ಬೆನ್ನಿಗೆ ಜೋತು ಬಿದ್ದಂತೆ ತನ್ನ ಜೀವ ಉಳಿಸಿಕೊಳ್ಳಲು ರೋಮಿಸಾ ಖಾತೂನ್ ಓಡುತ್ತಿದ್ದಾಳೆ, ದಿಢೀರನೆ ಆಕೆಯ ಎದೆ ಮತ್ತು ಹೊಟ್ಟೆಯಲ್ಲಿ ಭಾರೀ ನೋವು ಕಾಣಿಸುತ್ತದೆ. ನೆತ್ತರು ಒಂದೇ ಸಮನೆ ಹರಿದುದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಳು. ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕಣ್ಣು ತೆರೆದ ಆಕೆ ಮೊದಲು ಕೇಳಿದ್ದು ತನ್ನ ಮಗುವನ್ನು. ಆ ಮಗು ಪ್ರಜ್ಞೆ ತಪ್ಪಿದ ದಿನವೇ ಸತ್ತು ಹೋಗಿತ್ತು…
ಇದು 40 ವರ್ಷಗಳ ಹಿಂದೆ ನೆಲ್ಲಿ ಇಲ್ಲವೇ ನೆಲ್ಲೈನಲ್ಲಿ ನಡೆದ ಹತ್ಯಾಕಾಂಡದ ಒಂದು ಘಟನೆ. ಇಂತಹ ಅದೆಷ್ಟೋ ಕ್ರೌರ್ಯತೆಗಳು ನೆಲ್ಲೀ ಹಿಂಸಾಚಾರದಲ್ಲಿ ಕಾಣಸಿಗುತ್ತದೆ.


1983ರ ಫೆಬ್ರವರಿ 18ರಂದು ನಡೆದ ಈ ಹತ್ಯಾಕಾಂಡವು ಸ್ವತಂತ್ರ ಭಾರತದಲ್ಲೇ ಅತಿ ದೊಡ್ಡ ಹಿಂಸಾಕೃತ್ಯ ಎಂದು ಹೇಳಲಾಗಿದೆ. ನೆಲ್ಲೀ ಸಹಿತ ಅಸ್ಸಾಮಿನ ನಾಗೋನ್ ಜಿಲ್ಲೆಯ 14 ಗ್ರಾಮಗಳಲ್ಲಿ ನರಮೇಧಗಳು ನಡೆದಿದ್ದವು. ಆರು ಗಂಟೆಗಳ ರಕ್ತ ಸಿಕ್ತ ಹತ್ಯಾಕಾಂಡದಲ್ಲಿ ಸರಕಾರದ ಲೆಕ್ಕಾಚಾರ ಪ್ರಕಾರ, 2,000ಕ್ಕೂ ಅಧಿಕ ಮಂದಿ ಮತ್ತು ಸಾರ್ವಜನಿಕರ ಲೆಕ್ಕದಲ್ಲಿ 10,000ಕ್ಕೂ ಅಧಿಕ ಮಂದಿ ಕೊಲ್ಲಲ್ಪಟ್ಟರು.


ನೆಲ್ಲೀಯಲ್ಲಿ ಸಾವಿರಾರು ಮುಸ್ಲಿಂ ಕುಟುಂಬಗಳನ್ನು ಸರ್ವ ನಾಶ ಮಾಡಲಾಯಿತು ಮತ್ತು ಸಣ್ಣ ಮಕ್ಕಳನ್ನು ಸಹ ಕೊಲೆಗಾರರು ಕೊಂದು ಪಕ್ಕದ ಕೋಪಿಲಿ ನದಿಗೆ ಎಸೆದಿದ್ದರು.
“ಅವರು ನಮ್ಮನ್ನು ಓಡಿಸಿ ಓಡಿಸಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೊಂದು ಹಾಕಿದರು” ಎಂದು ಅಂದು ಹೇಗೋ ಬದುಕುಳಿದಿರುವ ಮುಹಮ್ಮದ್ ಸಫೀರುದ್ದೀನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಫೀರುದ್ದೀನ್ ಅವರ ತಾಯಿ, ಇಬ್ಬರು ಮಕ್ಕಳು, ಸಹೋದರನ ಸೊಸೆ, ಮತ್ತು ಸೋದರ ಸೊಸೆ ಕೂಡ ಅಂದು ಹತ್ಯೆಯಾಗಿದ್ದರು.
“ಅವರು ನಮ್ಮ ಮಸೀದಿಗೆ ಬಾಂಬ್ ಹಾಕಿದರು. ನಮ್ಮ 9 ಗ್ರಾಮಗಳ 9,000 ಜನರು 40,000 ದುಷ್ಕರ್ಮಿಗಳ ಗುಂಪಿನಿಂದ ಸುತ್ತುವರಿಯಲ್ಪಟ್ಟಿದ್ದರು’ ಎಂದು ನೆಲ್ಲೀ ಮಸೀದಿಯ ಕಾರ್ಯದರ್ಶಿಯಾಗಿದ್ದ ತಾಜುಲ್ ಹಕ್ ಅಂದಿನ ಘಟನೆಯನ್ನು ಸ್ಮರಿಸುತ್ತಾರೆ.


“ಅವರು ನಮ್ಮ ಇಡೀ ಗ್ರಾಮವನ್ನು ಸುಟ್ಟು ಹಾಕಿದರು. ಸಣ್ಣ ಮಕ್ಕಳನ್ನು ತಾಯಿಂದ ಕಿತ್ತುಕೊಂಡು ಅವರ ಎದುರೇ ಬೆಂಕಿಗೆ ಎಸೆದರು” ಎಂದು ಹಿಂಸೆಯನ್ನು ಕಣ್ಣಾರೆ ಕಂಡಿದ್ದ ವ್ಯಕ್ತಿಯೊಬ್ಬರು ಹೇಳುತ್ತಾರೆ.
ಅಕ್ರಮ ವಲಸೆ ಮತ್ತು ವಿದೇಶೀಯರ ವಿರುದ್ಧದ ಪ್ರತಿಭಟನೆಯೇ ಇದಕ್ಕೆ ಕಾರಣ ಎಂದು ಅಧ್ಯಯನಕಾರರು ಮತ್ತು ಚರಿತ್ರಕಾರರು ಹೇಳುತ್ತಾರೆ. ಎಜಿಪಿ- ಅಸೋಮ್ ಗಣ ಪರಿಷತ್ ಮತ್ತು ಎಎಎಸ್ ಯು- ಆಲ್ ಅಸ್ಸಾಂ ವಿದ್ಯಾರ್ಥಿ ಸಂಘವು 1979ರಿಂದ ಅಕ್ರಮ ವಲಸಿಗರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಚಳವಳಿ ನಡೆಸುತ್ತಿತ್ತು. ಉದ್ವಿಗ್ನ ಸ್ಥಿತಿ ಮತ್ತು ನಿತ್ಯ ಗಲಭೆಯ ಸುದ್ದಿ ಬರುತ್ತಿತ್ತು.
ಅಂತಹ ಪರಿಸ್ಥಿತಿಯಲ್ಲಿ 1983ರಲ್ಲಿ ಚುನಾವಣೆ ನಡೆಯಿತು. ಹಿರಿಯ ಪತ್ರಕರ್ತ ಹೇಮೇಂದ್ರ ನಾರಾಯಣ್ ಅವರ ಇಂಗ್ಲಿಷ್ ಪುಸ್ತಕದಲ್ಲಿ ‘25 ವರ್ಷ ನೆಲ್ಲೀ ಇನ್ನೂ ಕಾಡುತ್ತದೆ’ ಹೀಗೆ ಬರೆದಿದ್ದಾರೆ. ಅಸ್ಸಾಂ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಕೆ. ಪಿ. ಎಸ್. ಗಿಲ್ ಅವರ ವರದಿಯಂತೆ, ನೆಲ್ಲೀ ಸಹಿತ 23 ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಥಳೀಯತೆಯ ಹೋರಾಟದ ಕಾರಣ ಚುನಾವಣೆ ನಡೆಸುವ ಸ್ಥಿತಿ ಇರಲಿಲ್ಲ.
ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಚುನಾವಣೆ ಬಹಿಷ್ಕರಿಸಿತ್ತು. ಆ ಬಹಿಷ್ಕಾರ ಎದುರಿಸಲು ನೆಲ್ಲೀ ಪ್ರದೇಶದ ಮುಸ್ಲಿಮರು ಮತದಾನ ಮಾಡಿದರು. ಇದೇ ಕಾರಣ ಮುಂದಿಟ್ಟು ಸಂಘಪರಿವಾರ ಮುಸ್ಲಿಮರನ್ನು ಹತ್ಯೆ ಮಾಡಿತು. ಇದು ಆ ಕ್ಷಣದ ತೀರ್ಮಾನವಲ್ಲ. ಅವರು ಇದಕ್ಕಾಗಿ ಆರು ತಿಂಗಳುಗಳಿಂದ ತಯಾರಿ ನಡೆಸಿದ್ದರು. ನಮ್ಮನ್ನು ಆಗಿನಿಂದಲೇ ಜಗತ್ತಿನಿಂದ ಪ್ರತ್ಯೇಕಿಸಲಾಗುತ್ತಿತ್ತು ಎಂದು ಅಂದಿನ ಗಲಭೆಯಲ್ಲಿ ಬದುಕುಳಿದ ಮುಸ್ಲಿಮರು ಹೇಳುತ್ತಾರೆ.


ಪೊಲೀಸರ ಪಾತ್ರ
‘ನೆಲ್ಲೀ 1983’ ಪುಸ್ತಕದಲ್ಲಿ ದಿಗಂತ ಶರ್ಮಾ ವಿವರವಾಗಿ ಬರೆದಿದ್ದಾರೆ. “ಒಂದು ಅಪಾಯಕಾರಿ ಹತ್ಯಾಕಾಂಡ ನಡೆಯಲಿರುವುದು ಪೊಲೀಸರಿಗೆ ಮೂರು ದಿನಗಳಿಗೆ ಮೊದಲೇ ಗೊತ್ತಿತ್ತು. ನಾಗೋನ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಜಹೀರುದ್ದೀನ್ ಅಹ್ಮದ್ ರಿಗೂ ಎಚ್ಚರಿಸಿದ್ದೆ. ಜಹೀರುದ್ದೀನ್, ಮರಿಗಾಂವ್ 5ನೇ ಬೆಟಾಲಿಯನ್ ಕಮಾಂಡೆಂಟ್, ಸಬ್ ಡಿವಿಜನ್ ಪೊಲೀಸ್ ಅಧಿಕಾರಿ ಮತ್ತು ನಬಾ ಚೇತ್ಯೆ, ಆಫೀಸ್ ಇನ್ ಚಾರ್ಜ್ ರಿಂದ ಜಾಗೀರೋಡ್ ಪೊಲೀಸ್ ಠಾಣೆಗೆ ಎಚ್ಚರಿಕೆ ಮಾಹಿತಿ ರವಾನೆಯಾಗಿತ್ತು. ಆದರೆ ಅಲ್ಲಿನವರಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಪೊಲೀಸರು ಕೊಲೆ ತಡೆಯಲಿಲ್ಲವಷ್ಟೇ ಅಲ್ಲ; ಪೊಲೀಸರು ಹತ್ಯಾಕಾಂಡದಲ್ಲಿ ಪಾಲ್ಗೊಂಡಿದ್ದರು ಎಂಬ ಅಪಾದನೆಯೂ ಇದೆ.


“ಅಸ್ಸಾಂ ಪೊಲೀಸರು ಜನರನ್ನು ಕೊಲೆ ಮಾಡಿದರು, ಅವರು ಗೊಂದಲಕ್ಕೊಳಗಾಗುವಂತೆ ಅವರ ದಾರಿ ತಪ್ಪಿಸಲಾಗಿತ್ತು. ಸಿಆರ್ ಪಿಎಫ್’ನವರು ಏನೂ ನಡೆದಿದೆ; ಎಲ್ಲ ಸರಿಯಾಗಿದೆ” ಎಂದು ಹೇಳಿದರು ಎಂದು ಕಣ್ಣಾರೆ ಕಂಡವರು ಹೇಳುತ್ತಾರೆ.


ಎಎಎಸ್ ಯು ಜೊತೆಗೆ ಆರೆಸ್ಸೆಸ್
2017ರಲ್ಲಿ ಆರೆಸ್ಸೆಸ್’ನವರಾದ ರಜತ್ ಸೇಥಿ ಮತ್ತು ಸುಭ್ರಾಸ್ತ್ರ ಒಂದು ಪುಸ್ತಕ ಬರೆದಿದ್ದು, ಅದರಲ್ಲಿ 1975ರವರೆಗೆ ಅಸ್ಸಾಮದ ಪ್ರತಿ ಜಿಲ್ಲೆಯಲ್ಲೂ ಆರೆಸ್ಸೆಸ್ ಶಾಖೆ ಇತ್ತು. 1983ರ ಏಪ್ರಿಲ್ 10ರಂದು ಮುಖ್ಯಮಂತ್ರಿ ಹಿತೇಂದ್ರ ಸೈಕಿಯಾ ನಡೆಸಿದ ಒಂದು ಪತ್ರಿಕಾಗೋಷ್ಠಿಯಲ್ಲಿ ಕೆಲವು ಎಎಎಸ್ ಯು ಕಾರ್ಯಕರ್ತರು ಮುಸ್ಲಿಮರನ್ನು ವಿದೇಶೀಯರೆಂದು ಸಂಘಟಿತ ಕೊಲೆ ನಡೆಸುವುದರಲ್ಲಿ ತೊಡಗಿದ್ದಾರೆ ಎಂದು ಪ್ರೆಸ್ ನೋಟ್ ನೀಡಿದ್ದರು.
ನೆಲ್ಲೀ ಹತ್ಯಾಕಾಂಡಕ್ಕೆ ಕೆಲವು ಬುಡಕಟ್ಟು ಜನರನ್ನೂ ದೂರಬೇಕಾಗುತ್ತದೆ. ತಿವಾ ಮತ್ತು ಲಾಲುಂಗ್ ಬುಡಕಟ್ಟು ಜನರು ನೇರವಾಗಿ ಈ ಹತ್ಯಾಕಾಂಡದಲ್ಲಿ ಪಾಲ್ಗೊಂಡಿದ್ದರು. ತಿವಾ ಸ್ವಾಯತ್ತ ಮಂಡಳಿಗಾಗಿ ಹೋರಾಟ ನಡೆಸಿದ್ದ ಸಂಘಟನೆಯ ಸ್ಥಾಪಕ ಎನ್ ಕೆ ಆರ್ ಅವರು ನೆಲ್ಲೀ ಹತ್ಯಾಕಾಂಡಕ್ಕೆ ತಿವಾ ಜನರನ್ನೇ ದೂರಿದರೆ ಫಲವಿಲ್ಲ; ಲಾಲುಂಗ್ ಮೊದಲಾದವರೂ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಈ ಕೊಲೆಯಲ್ಲಿ ಒಂದಷ್ಟು ಆರೆಸ್ಸೆಸ್ ನವರು ಹಾಗೂ ಅಸ್ಸಾಂ ಗಣ ಪರಿಷತ್ ನವರು ಇದ್ದರು ಎಂದೂ ಅವರು ಹೇಳಿದ್ದಾರೆ.
“ಈ ಹತ್ಯಾಕಾಂಡಕ್ಕೆ ತಿವಾ ಸಮುದಾಯದವರು ಮಾತ್ರ ಕಾರಣರಲ್ಲ. ಹತ್ಯಾಕಾಂಡ ನಡೆದ ಪ್ರದೇಶವು ಬುಡಕಟ್ಟು ಜನರ ನೆಲೆಯಾಗಿದ್ದು ಅಲ್ಲಿ ತಿವಾ ಮತ್ತು ಲಾಲುಂಗ್ ಜನರು ವಾಸಿಸುತ್ತಾರೆ. ಆದ್ದರಿಂದ ಹತ್ಯಾಕಾಂಡಕ್ಕೆ ಎರಡೂ ಜನಾಂಗವನ್ನು ದೂರಬೇಕಾಗಿದೆ. ಮುಖ್ಯ ಸಂಗತಿಯೇನೆಂದರೆ, ಆರೆಸ್ಸೆಸ್ ಮತ್ತು ಎಎಎಸ್ ಯು ಹಿಂದುತ್ವ ಗುಂಪುಗಳು ಬುಡಕಟ್ಟು ಜನರನ್ನು ಎತ್ತಿ ಕಟ್ಟಿ ಮುಸ್ಲಿಮರ ಕೊಲೆ ಮಾಡಿದ್ದಾರೆ ಮತ್ತು ಮಾಡಿಸಿದ್ದಾರೆ” ಎಂದು ಎನ್ ಕೆ ಆರ್ ಹೇಳಿದ್ದಾರೆ.


ಈ ಸಂಬಂಧ ಟಿ. ಪಿ. ತಿವಾರಿ ಆಯೋಗ ನೇಮಿಸಲಾಯಿತು. ಆಯೋಗವು ಮರು ವರ್ಷವೇ ವರದಿ ನೀಡಿದರೂ ಅದನ್ನು ಹೊರಗಿಡಲು 35 ವರ್ಷಗಳು ಬೇಕಾದವು. ಈ ಹತ್ಯಾಕಾಂಡದ ಬಳಿಕ 688 ಎಫ್’ಐಆರ್’ಗಳು ದಾಖಲಾದವು; ಅವುಗಳಲ್ಲಿ 378 ಇಂದಿಗೂ ಮುಚ್ಚಿಟ್ಟ ಕಡತಗಳಾಗಿಯೇ ಇವೆ. 10,000 ಜನರ ಕೊಲೆ ನಡೆದ ಒಂದು ಹತ್ಯಾಕಾಂಡದಲ್ಲಿ ಒಬ್ಬರಿಗೆ ಕೂಡ ಶಿಕ್ಷೆಯಾಗಿಲ್ಲ ಎಂಬುದೇ ಸೋಜಿಗದ ಸಂಗತಿಯಲ್ಲವೆ? ಇನ್ನೂ ಹೇಳಬೇಕೆಂದರೆ ಅಸ್ಸಾಂ ಚಳವಳಿಯಲ್ಲಿ ಸತ್ತವರನ್ನು ಹುತಾತ್ಮರೆಂದು ಮನ್ನಿಸಲಾಗಿದೆ. ಆದರೆ ನೆಲ್ಲೀಯಲ್ಲಿ ಕೊಲೆಯಾದ ಮುಸ್ಲಿಮರಿಗೆ ಯಾವ ನ್ಯಾಯವೂ ಸಿಗಲಿಲ್ಲ.
ಅಸ್ಸಾಂ ಚಳವಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ರೂ. 35,000 ಪರಿಹಾರ ನೀಡಲಾಗಿದೆ. ನೆಲ್ಲೀ ಹುತಾತ್ಮರಿಗೆ ರೂ. 5,000 ಮಾತ್ರ ನೀಡಲಾಗಿದೆ. ಮರು ವರ್ಷ 1984ರಲ್ಲಿ ಸಿಖ್ ಹತ್ಯಾಕಾಂಡ ನಡೆದಾಗಲೂ ತಲಾ ರೂ. 35,000 ಪರಿಹಾರ ನೀಡಲಾಗಿದೆ. ನೆಲ್ಲೀ ಜನರಿಗೆ 5,000 ರೂಪಾಯಿಯ ಅದೇ ನೋವು.


ಈಗಿನ ಸ್ಥಿತಿ
ಇಂದಿನವರೆಗೂ ನೆಲ್ಲೀ ಕೊಲೆಗಾರರು ಯಾರಿಗೂ ಶಿಕ್ಷೆ ಆಗಿಲ್ಲ. ಅಂತಹ ಭಾರೀ ಹತ್ಯಾಕಾಂಡವನ್ನು ತಡೆಯುವ ಅವಕಾಶ ಖಂಡಿತ ಪೊಲೀಸರಿಗೆ ಇತ್ತು. ಆ ಹತ್ಯಾಕಾಂಡ ನಡೆದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಎಂದರೆ ಕಾಂಗ್ರೆಸ್ಸಿನದೇ ಹಿಡಿತವಿತ್ತು. ಆದರೆ 10,000 ಜನರ ಕೊಲೆಗಾರರು ಈ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷಿಸಲ್ಪಟ್ಟಿಲ್ಲ. ಇಂದಿಗೂ ನೆಲ್ಲೀಯಲ್ಲಿ ಬದುಕುಳಿದಿರುವವರು ಅದೇ ಕೆಟ್ಟ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ.

Join Whatsapp
Exit mobile version