Home ಟಾಪ್ ಸುದ್ದಿಗಳು ಸರ್ಕಾರದಿಂದ ಹಾಲಕ್ಕಿ ಸಮುದಾಯದ ನಿರ್ಲಕ್ಷ್ಯ| ಪದ್ಮಶ್ರೀ ಪ್ರಶಸ್ತಿ ವಾಪಸ್ ಕೊಡಲು ಮುಂದಾದ ಸುಕ್ರಜ್ಜಿ!

ಸರ್ಕಾರದಿಂದ ಹಾಲಕ್ಕಿ ಸಮುದಾಯದ ನಿರ್ಲಕ್ಷ್ಯ| ಪದ್ಮಶ್ರೀ ಪ್ರಶಸ್ತಿ ವಾಪಸ್ ಕೊಡಲು ಮುಂದಾದ ಸುಕ್ರಜ್ಜಿ!

ಕಾರವಾರ: ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಲು ಮುಂದಾಗಿದ್ದಾರೆ.

ಇದೀಗ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಾಗಿರುವ ಬುಡಕಟ್ಟು ಸಮುದಾಯದ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟ ತೀವ್ರಗೊಂಡಿದೆ. ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದಲ್ಲಿನ ವಿಶಿಷ್ಟ ಬುಡಕಟ್ಟು ಜನಾಂಗವಾಗಿದ್ದು, ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

ಸರ್ಕಾರದ ಸೌಲಭ್ಯದಿಂದ ಜನಾಂಗ ವಂಚಿತವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಒಂದಿಷ್ಟು ಸಹಾಯವಾಗಲಿದೆ. ಈ ಉದ್ದೇಶದೊಂದಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಸುಕ್ರಜ್ಜಿ, ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತನ್ನ ಕಲೆಯನ್ನು ಗುರುತಿಸಿ ಕೇಂದ್ರ ಸರ್ಕಾರ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ.

ಈ ಜನಾಂಗ ಹಲವಾರು ವರ್ಷಗಳಿಂದ ಸರ್ಕಾರದ ನಿರ್ಲಕ್ಷಕ್ಕೆ ತುತ್ತಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಇಂದಿಗೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಇದೇ ಸಮುದಾಯಕ್ಕೆ ಸೇರಿದ ಅಂಕೋಲಾ ತಾಲೂಕಿನ ಬಡಗೇರಿಯ, ಜಾನಪದ ಕೋಗಿಲೆ ಖ್ಯಾತಿಯ, ನಾಡೋಜ, ಪದ್ಮಶ್ರೀ ಸುಕ್ರಿ ಬೊಮ್ಮುಗೌಡ ಹೋರಾಟಕ್ಕೆ ಮುಂದಾಗಿದ್ದಾರೆ.

ಹಾಲಕ್ಕಿ ಜನಾಂಗವನ್ನು ಈ ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ದೊಡ್ಡ ಹೋರಾಟ ನಡೆದ ಪರಿಣಾಮ ರಾಜ್ಯ ಸರ್ಕಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಬಗ್ಗೆ ಹಲವು ಮುಖಂಡರು ದೆಹಲಿಗೆ ತೆರಳಿ ಐದಾರು ವರ್ಷದಿಂದ ಒತ್ತಡ ಹೇರಿದ್ದರು. ಇದಾಗ್ಯೂ ಇಂದಿಗೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿಲ್ಲ. ಕಳೆದ 20 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ನಿರ್ಲಕ್ಷ ಮಾಡಲಾಗುತ್ತಿದೆ ಎಂದು ಸುಕ್ರಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version