Home ಅಂಕಣಗಳು ಮಂಗಳೂರು ಮುಸ್ಲೀಮರ ಜೈಭೀಮ್ ಸಿನೇಮಾ…!

ಮಂಗಳೂರು ಮುಸ್ಲೀಮರ ಜೈಭೀಮ್ ಸಿನೇಮಾ…!

✍️ನವೀನ್ ಸೂರಿಂಜೆ

ನಮ್ಮ ದೇಶದ ಮುಸ್ಲಿಮರೂ ಕೂಡಾ ಕ್ರಿಮಿನಲ್ ಟ್ರೈಬ್ ತರಹ ಕ್ರಿಮಿನಲ್ ಕಮ್ಯೂನಿಟಿ ಎಂದೇ ಪರಿಗಣಿಸಲ್ಪಟ್ಟಿರುವ ಅನುಮಾನಿತ ಮತ್ತು ಅವಮಾನಿತ ಸಮುದಾಯ. ಕಳ್ಳತನ ಆದ ತಕ್ಷಣ ಕೆಲ ಆದಿವಾಸಿ ಸಮುದಾಯವನ್ನು ಹೇಗೆ ಬಂಧಿಸಲಾಗುತ್ತೋ, ಕೋಮುಗಲಭೆ, ಹಿಂದೂಗಳ ಸಾವು, ಬಾಂಬು ಕಂಡಾಕ್ಷಣ ಮುಸ್ಲೀಮರನ್ನು ಆರೋಪಿಯನ್ನಾಗಿಸುವ, ಅವಮಾನಿಸುವ, ಅನುಮಾನಿಸುವ ಕೆಲಸ ನಡೆಯುತ್ತದೆ.


ಅವತ್ತು ಮಂಗಳೂರಿನ ಕೋಣಾಜೆ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಕಾರ್ತಿಕ್ ರಾಜ್ ಎಂಬ ಯುವಕನ ಶವ ಬಿದ್ದಿರುತ್ತೆ. ಮೃತ ಕಾರ್ತಿಕ್ ರಾಜ್ ಬಿಜೆಪಿ ಮುಖಂಡ ಉಮೇಶ್ ಗಾಣಿಗರ ಪುತ್ರ. ಹಾಗಾಗಿ ಪ್ರಕರಣ ಕೋಮುಬಣ್ಣ ಪಡೆದುಕೊಳ್ಳುತ್ತದೆ. ಕಾರ್ತಿಕ್ ರಾಜ್ ರನ್ನು ಮುಸ್ಲೀಮರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತದೆ. ಠಾಣೆಯ ಪೊಲೀಸರು ತಕ್ಷಣ ಒಂದಷ್ಟು ಮುಸ್ಲಿಂ ಯುವಕರನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟುಬಿಡುತ್ತದೆ. ಮುಸ್ಲೀಮರ ಪಾತ್ರ ಇಲ್ಲ ಎಂದು ಗೊತ್ತಾದ ಬಳಿಕ ಪ್ರಕರಣ ಭೇದಿಸಲಾಗದೆ ಪೊಲೀಸರು ಸುಮ್ಮನಾಗುತ್ತಾರೆ. ಆದರೆ ಹಿಂದೂ ಸಂಘಟನೆಗಳು ಕಾರ್ತಿಕ್ ರಾಜ್ ಕೊಲೆ ಆರೋಪದಲ್ಲಿ ಮುಸ್ಲಿಮರನ್ನು ಬಂಧಿಸಲೇಬೇಕು ಎಂದು ಪೊಲೀಸರ ಮೇಲೆ ಒತ್ತಡ ಹಾಕುತ್ತದೆ. ಕೋಣಾಜೆ ಚಲೋ ಎಂದು ಹಿಂದೂ ಸಂಘಟನೆಗಳು ಸಮಾವೇಶ ನಡೆಸುತ್ತದೆ. ಸಮಾವೇಶದಲ್ಲಿ “ಕಾರ್ತಿಕ್ ರಾಜ್ ಕೊಲೆ ಆರೋಪಿಗಳನ್ನು ಬಂಧಿಸದೇ ಇದ್ದರೆ ಇಡೀ ಜಿಲ್ಲೆಗೆ ಬೆಂಕಿಕೊಡಬೇಕಾಗುತ್ತೆ” ಎಂದು ಭಾಷಣ ಮಾಡುತ್ತಾರೆ.

ಈಗ ಪೊಲೀಸರ ಮೇಲೆ ನಿಜವಾದ ಒತ್ತಡ ಪ್ರಾರಂಭವಾಗುತ್ತದೆ. ರಾತ್ರಿ ಹಗಲೆನ್ನದೆ ಕೋಣಾಜೆಯ ಮುಸ್ಲೀಮರ ಮನೆಗೆ ಪೊಲೀಸರು ನುಗ್ಗುತ್ತಾರೆ. ಬೂಟುಗಾಲಲ್ಲಿ ಮನೆಯ ಬಾಗಿಲುಗಳನ್ನು ಒಡೆಯಲಾಗುತ್ತದೆ. ರಾತ್ರಿ 2 ಗಂಟೆಯ ಬಳಿಕವೇ ಮುಸ್ಲೀಮರ ಮನೆಗೆ ದಾಳಿ ಮಾಡಿ ಸಿಕ್ಕಸಿಕ್ಕವರನ್ನು ಅಕ್ರಮ ಬಂಧನ ಮಾಡಿ ಹಲ್ಲೆ ನಡೆಸುತ್ತಾರೆ. ಇದೇ ಪ್ರಕರಣದಲ್ಲಿ ಮುಸ್ಲೀಮರ ಮನೆಗೆ ನುಗ್ಗಿ ಅಮಾಯಕ ಶಿಹಾಬ್ ಎಂಬಾತನನ್ನು ಏಳು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ, ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಡಲಾಗುತ್ತೆ. ಚಡ್ಡಿಯಲ್ಲಿ ಕೂರಿಸಿ ಲಾಠಿ, ಬೂಟಿನಲ್ಲಿ ಠಾಣೆಯ ಪೊಲೀಸರು ಹಲ್ಲೆ ನಡೆಸುತ್ತಾರೆ. ಆ ಬಳಿಕ ರಾತ್ರಿ ಲಾಕಪ್ಪಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಶಿಹಾಬ್ ನನ್ನು ಎಚ್ಚರಿಸಿ ಮತ್ತೆ ಹಲ್ಲೆ ಮಾಡಿ ಕ್ರೈಂ ಟೀಮ್ ವಿಚಾರಣೆ ಮಾಡುತ್ತೆ. ಅಷ್ಟರಲ್ಲಿ ಶಿಹಾಬ್ ಮೇಲೆ ಗಂಭೀರ ಹಲ್ಲೆಯಾಗಿರುವ ಸುದ್ದಿ ಊರಲ್ಲಿ ಗುಸುಗುಸು ಪ್ರಾರಂಭವಾಗಿದ್ದು ಪೊಲೀಸರಿಗೆ ಗೊತ್ತಾಗಿ ಆತನ ವಿರುದ್ದ ಪತ್ತೆಯಾಗದ ಹಳೇ ಸಣ್ಣ ಕೇಸು ದಾಖಲಿಸಿ ಜೈಲಿಗೆ ಹಾಕುತ್ತಾರೆ.


ಇದು ಶಿಹಾಬ್ ಕತೆ ಮಾತ್ರವಲ್ಲ. ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಭೇದಿಸಲೇಬೇಕು ಎಂಬ ಹಿಂದೂ ಸಂಘಟನೆ ಮತ್ತು ಬಿಜೆಪಿಯ ಒತ್ತಡದ ಹಿನ್ನಲೆಯಲ್ಲಿ ನೂರಾರು ಮುಸ್ಲಿಂ ಯುವಕರು, ಬಾಲಕರಿಗೆ ಅತ್ಯಂತ ಕೆಟ್ಟ ರೀತಿಯ ಹಲ್ಲೆ ಮಾಡಿ ವಿಚಾರಣೆ ನಡೆಸಿ ಬಿಡಲಾಗುತ್ತೆ. ಸಿಕ್ಕಸಿಕ್ಕ ಮುಸ್ಲೀಮರನ್ನು ಬೇಕಾಬಿಟ್ಟಿ ಎಳೆದು ತರವುದು, ಬಟ್ಟೆ ಬಿಚ್ಚಿಸಿ ಲಾಕಪ್ಪಿನಲ್ಲಿ ಹಲ್ಲೆ ಮಾಡಿ “ಕಾರ್ತಿಕ್ ಕೊಲೆಯನ್ನು ಒಪ್ಪಿಕೋ” ಎಂದು ಒತ್ತಾಯಿಸುವುದು ವಾರಗಟ್ಟಲೆಯ ಪ್ರಕ್ರಿಯೆಯಾಯ್ತು. ಆ ಸಂದರ್ಭದಲ್ಲಿ ಕೊಣಾಜೆ, ಉಳ್ಳಾಲ ಭಾಗದ ಮುಸ್ಲೀಮರ ಮನೆಗಳಲ್ಲಿ ಸೂತಕದ ಛಾಯೆ. ಹೆಚ್ಚಿನ ಎಲ್ಲಾ ಮನೆಗಳಲ್ಲೂ ನೋವು, ಭಯ- ಆತಂಕ..! ಬೆಂಗಳೂರು, ಮಂಗಳೂರು ಬಿಜೆಪಿ ನಾಯಕರ ಒತ್ತಡದ ಹಿನ್ನಲೆಯಲ್ಲಿ ಪ್ರತೀ ಮುಸ್ಲೀಮರ ಮನೆಗೂ ತಡರಾತ್ರಿ ದಾಳಿ ನಡೆಸಲಾಯ್ತು. ಈ ಸಮಯದಲ್ಲಿ ಫಾರೂಕ್ ಎಂಬವರ ಮನೆಗೆ ನುಗ್ಗಿದ್ದ ಪೊಲೀಸರು ಬೂಟುಗಾಲಿನಿಂದ ಅವರ ತಂದೆಗೆ ಹೊಡೆದಿರುವುದರಿಂದ ಶಾಕ್ ಗೆ ಒಳಗಾಗಿ ತೀರಾ ಇತಿಚ್ಚಿನವರೆಗೂ ಪ್ರಜ್ಞೆಯಿಲ್ಲದಂತೆ, ಬುದ್ದಿ ಸ್ಥಿಮಿತವೇ ಕಳೆದುಕೊಂಡಂತೆ ಬದುಕುತ್ತಿದ್ದಾರೆ.


ಕಾರ್ತಿಕ್ ರಾಜ್ ಕೊಲೆ ಕೇಸಲ್ಲಿ ಯಾರನ್ನಾದರೂ ಫಿಕ್ಸ್ ಮಾಡಬೇಕು ಎಂದು ಮುಸ್ಲಿಂ ಹುಡುಗರ ಹುಡುಕಾಟದಲ್ಲಿದ್ದ ಪೊಲೀಸರು ಆಯ್ದುಕೊಂಡಿದ್ದು ಕೋರ್ಟ್ ಆವರಣವನ್ನು. ಜೈಭೀಮ್ ಸಿನೇಮಾದಲ್ಲಿ ಜೈಲಿಂದ ಹೊರ ಬಂದ ಬುಡಕಟ್ಟು, ಆದಿವಾಸಿಗಳನ್ನು ಫಿಕ್ಸ್ ಮಾಡಲು ಕರೆದುಕೊಂಡು ಹೋದರೆ, ಕರಾವಳಿಯಲ್ಲಿ ಈ ಹಿಂದಿನ ಕೋಮುಗಲಭೆಯ ಆರೋಪಿಗಳು ಯಾರಾದರೂ ಸಿಗುತ್ತಾರೆಯೇ ಎಂದು ಪೊಲೀಸರು ಹುಡುಕುತ್ತಾರೆ.


ಹಳೇ ಕೋಮುಗಲಭೆ ಪ್ರಕರಣದಲ್ಲಿ ಫಿಕ್ಸ್ ಆಗಿದ್ದ ಅಹಮ್ಮದ್ ಖುರೇಷಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ಕೊಡುವುದಿತ್ತು. ಮದ್ಯಾಹ್ನದ ನಂತರ ಕೋರ್ಟ್ ಕಲಾಪ ಇದ್ದಿದ್ದರಿಂದ ಕೋರ್ಟ್ ಕ್ಯಾಂಟೀನ್ ಗೆ ಹೋಗಿ ಊಟ ಮಾಡಲು ಕುಳಿತಿದ್ದರು. ಅಷ್ಟರಲ್ಲಿ ಯಾರೋ ಒಬ್ಬ ಬಂದು ಊಟದ ಬಟ್ಟಲನ್ನು ಕಿತ್ತುಕೊಂಡು ಹೊಟೇಲ್ ವಾಶ್ ಬೇಸಿನ್ ಗೆ ತಟ್ಟೆಯನ್ನು ಹಾಕಿಬಿಟ್ಟ. ಇನ್ನಿಬ್ಬರು ಹಿಂದಿನಿಂದ ಬಂದು ಖುರೇಷಿಯ ಎರಡೂ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲುಗಾಡದಂತೆ ಮಾಡಿ, ಹೊರಗೆಳೆದುಕೊಂಡು ಬಂದರು. ಅಲ್ಲಿದ್ದ ವಕೀಲರುಗಳು ಯಾರು ನೀವು ಎಂದು ಹೇಳಿದಾಗ “ನಾವು ಪೊಲೀಸರು” ಎಂದು ಹೇಳಿದ್ದರಿಂದ ಖುರೇಷಿಗೆ ಅವರು ಪೊಲೀಸರು ಎಂದು ತಿಳಿಯಿತು. ಖುರೇಷಿಯನ್ನು ಹಾಗೇ ಧರಧರನೇ ಎಳೆದುಕೊಂಡ ಹೋದ ಪೊಲೀಸರು ಕೋರ್ಟ್ ಆವರಣದ ಹೊರಭಾಗದಲ್ಲಿ ನಿಲ್ಲಿಸಿದ್ದ ಖಾಸಗಿ ಕ್ವಿಡ್ ಕಾರಿನಲ್ಲಿ ಖುರೇಷಿಯನ್ನು ಬಲತ್ಕಾರವಾಗಿ ತುಂಬಿಕೊಂಡು ಹೋದರು.


ಖುರೇಷಿಯನ್ನು ಕಾರಿನಲ್ಲಿ ತುಂಬಿಸಿಕೊಂಡ ಪೊಲೀಸರು ನೇರವಾಗಿ ಸಿಸಿಬಿ ಕಚೇರಿಗೆ ಕೊಂಡೊಯ್ಯುತ್ತಾರೆ. ಯಾಕೆ ನನ್ನನ್ನು ಕರೆದುಕೊಂಡು ಬಂದಿದ್ದೀರಿ ? ನಾನು ಈ ಹಿಂದೆಯೂ ಗಲಭೆ ಕೇಸ್ ನಲ್ಲಿ ಫಿಕ್ಸ್ ಆಗಿ ಜೀವನ ಹಾಳಾಗಿದೆ. ದಯವಿಟ್ಟು ಬಿಟ್ಟು ಬಿಡಿ. ನಾನೇನೂ ಮಾಡಿಲ್ಲ ಎಂದು ಖುರೇಷಿ ಸಿಸಿಬಿ ಕಚೇರಿಯ ಪೊಲೀಸರಲ್ಲಿ ಅಂಗಾಲಾಚುತ್ತಾರೆ. ಖುರೇಷಿಯನ್ನು ನೆಲಕ್ಕೆ ತಳ್ಳಿದ ಪೊಲೀಸರು “ಏನು ಮಾಡಿದ್ದೀಯಾ ? ಕಾರ್ತಿಕ್ ರಾಜ್ ಕೊಲೆಯನ್ನು ನೀನೇ ಮಾಡಿದ್ದಿಯಾ ? ಒಪ್ಪಿಕೊಂಡು ಬಿಡು” ಎನ್ನುತ್ತಾರೆ. ಇಲ್ಲ, ನಾನು ಕೊಲೆ ಮಾಡಿಲ್ಲ ಎಂದು ಖುರೇಷಿ ಹೇಳಿದಾಗ ದೂರದಲ್ಲಿ ನಿಂತಿದ್ದ ಇನ್ಸ್ ಪೆಕ್ಟರ್ ಕೋಪದಿಂದ ಹತ್ತಿರ ಬಂದು “ಅದೇನು ಮಾಡ್ತೀರೋ ಗೊತ್ತಿಲ್ಲ. ಕೈಕಾಲು ಮುರೀತಿರೋ, ಸಾಯಿಸ್ತೀರೋ ಏನ್ ಬೇಕಾದ್ರೂ ಮಾಡಿ. ಕಾರ್ತಿಕ್ ರಾಜ್ ಕೊಲೆ ನಾನೇ ಮಾಡಿದ್ದು ಅಂತ ಈತ ಒಪ್ಕೋಬೇಕು. ಈತ ನಮ್ ಕಸ್ಟಡಿಯಲ್ಲಿ ಇರೋದು ನಮಗೆ ಮತ್ತು ಕಮಿಷನರ್ಗೆ ಬಿಟ್ಟು ಬೇರೆಯವರಿಗೆ ಗೊತ್ತಾಗಕೂಡದು” ಎಂದು ಹೇಳಿ ಹೊರಡುತ್ತಾರೆ.


ಪೊಲೀಸರು ಖುರೇಷಿ ಕಣ್ಣಿಗೆ ಬಟ್ಟೆ ಕಟ್ಟಿದರು. ಎರಡೂ ಕೈಯ್ಯನ್ನು ಕೋಳ ಹಾಕಿ ಹಿಂಬದಿಗೆ ಕಟ್ಟಲಾಯ್ತು. ಗಾಡಿ ಹತ್ತಿಸಿ ನಿಗೂಡ ಸ್ಥಳಕ್ಕೆ ಕರೆದೊಯ್ದರು, ಅದೊಂದು ಹಳೇ ಕಟ್ಟಡ. ಆ ಕಟ್ಟಡದೊಳಗೆ ಹೋದ ಬಳಿಕ ಖುರೇಷಿಯ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಲಾಯ್ತು. ಆ ಕಟ್ಟಡದ ಕೋಣೆಯೊಂದರಲ್ಲಿ ಖುರೇಷಿಯನ್ನು ಖೂಡಿ ಹಾಕಲಾಯಿತು. ಕೋನೆಯಲ್ಲೊ ಒಂದು ಬೆಂಚು, ಒಂದು ಹಗ್ಗ, ಒಂದು ಸುತ್ತಿಗೆ, ಒಂದು ಕಬ್ಬಿಣದ ರಾಡ್, ಒಂದು ದುಂಡಗಿನ ಕರದ ತುಂಡು, ಕುದುರುಗೆ ಹೊಡೆಯುವ ಛಾಟಿ, ಬ್ಯಾಟರಿ ಚಾಲಿತ ಸಣ್ಣ ಮೋಟರ್ ಇತ್ತು. ಖುರೇಷಿಯನ್ನು ಅಲ್ಲಿದ್ದ ಬೆಂಚಿಗೆ ಮಲಗಿಸಿ ಕೈಯ್ಯನ್ನು ಬೆಂಚಿನ ತಳಭಾಗಕ್ಕೆ ತಂದು ಕಟ್ಟಲಾಯ್ತು. ಇಬ್ಬರು ಪೊಲೀಸರು ಲಾಠಿಯಿಂದ ಖುರೇಷಿಯ ಪಾದಕ್ಕೆ ನಿರಂತರ ಹೊಡೆಯಲಾರಂಬಿಸಿದರು. ಸಂಜೆ ಪ್ರಾರಂಭವಾದ ಲಾಠಿಯ ಹೊಡೆತ ಮಧ್ಯರಾತ್ರಿಯವರೆಗೂ ಮುಂದುವರೆಯಿತು. ಪೊಲೀಸರ ಮೂರು ಬಿದಿರಿನ ಲಾಠಿಗಳು ಮುರಿದವು. ಪ್ರತೀ ಹೊಡೆತದ ಮಧ್ಯೆ 15 ನಿಮಿಷ ವಿರಾಮ ಇರುತ್ತಿತ್ತು. ಆ ಅವಧಿಯಲ್ಲಿ “ಕಾರ್ತಿಕ್ ಕೊಲೆಯನ್ನು ಒಪ್ಪಿಕೊಂಡು ಬಿಡು” ಎಂಬ ಪೊಲೀಸರ ಬೇಡಿಕೆ. ಖುರೇಷಿ ನಿರಾಕರಿಸುತ್ತಲೇ ಇಲ್ಲ. ಸತ್ತರೂ ಪರವಾಗಿಲ್ಲ, “ನಾನು ಹಿಂದುವನ್ನಾಗಲೀ, ಯಾರನ್ನಾಗಲೀ ಕೊಂದಿಲ್ಲ, ಕೊಲ್ಲಲ್ಲ” ಎಂದ ಖುರೇಷಿ. ಪೊಲೀಸರ ಪಿತ್ತ ನೆತ್ತಿಗೇರಿತ್ತು.


ಬೆಂಚಿನಿಂದ ಖುರೇಷಿಯನ್ನು ಇಳಿಸಿ ನೆಲದ ಮೇಲೆ ಮಲಗಿಸಿದರು. ಖುರೇಷಿಯ ಎರಡೂ ಕೈಯ್ಯನ್ನು ಈಗ ಮುಂಬಾಗದಲ್ಲಿ ಕಟ್ಟಲಾಯ್ತು. ಕಾಲಿಗೂ ಹಗ್ಗ ಬಿಗಿಯಲಾಯ್ತು, ಆ ಬಳಿಕ ದುಂಡಗಿನ ಮರದ ತುಂಡನ್ನು ಖುರೇಷಿಯ ತೊಡೆಯ ಮೇಲೆ ಇಟ್ಟು ಅದರ ಮೇಲೆ ಇಬ್ಬರು ಪೊಲೀಸರು ನಿಂತರು. ಪೊಲೀಸರ ಭಾಷೆಯಲ್ಲಿ ಇದಕ್ಕೆ ರೋಲರ್ ಹಾಕುವುದು ಅನ್ನುತ್ತಾರೆ. ಅಸಹನೀಯವಾದ ನೋವು ಶುರುವಾಗುತ್ತದೆ. ಪ್ರಾಣವನ್ನೇ ರಣಹದ್ದುಗಳು ಕಿತ್ತು ತಿನ್ನುತ್ತಿದೆಯೇನೋ ಎಂದು ಭಾಸವಾಗುವ ರೀತಿಯಲ್ಲಿ ಖುರೇಷಿ ಬೊಬ್ಬಿಡಲು ಶುರು ಮಾಡಿದರು. ಇಷ್ಟಾದರೂ ರೋಲರ್ ಟ್ರೀಟ್ಮೆಂಟ್ ನಿಲ್ಲಲಿಲ್ಲ. ಖುರೇಷಿಯ ದೇಹಸ್ಥಿತಿ ಸಂಪೂರ್ಣ ಕುಸಿದು ಹೋದರೂ ಕಾರ್ತಿಕ್ ರಾಜ್ ಕೊಲೆಯನ್ನು ಒಪ್ಪಿಕೊಳ್ಳಲಿಲ್ಲ. ಅಷ್ಟರಲ್ಲಿ ಬ್ಯಾರಿ ಭಾಷೆಯಲ್ಲಿ ಮಾತನಾಡುವ ಪೊಲೀಸ್ ಸಿಬ್ಬಂದಿ ಬಂದ. ಆತ ಮುಸ್ಲೀಮನೆಂದು ಭಾಷೆಯಲ್ಲಿ ಗೊತ್ತಾಯ್ತು. ಆತ ಖುರೇಷಿಯ ಹಿತೈಷಿಯಂತೆ ನಟಿಸಿದ. “ಯಾಕೆ ಇಷ್ಟು ನೋವು ತಿನ್ನುತ್ತಿ ? ಒಪ್ಪಿಕೊಂಡು ಬಿಡು. ನಂತ್ರ ಜಾಮೀನು ಆಗುವ ತರಹ ನೋಡಿಕೊಂಡರಾಯ್ತು” ಎಂದು ಆತ್ಮೀಯನೆಂಬಂತೆ ಸಲಹೆ ನೀಡಿದ. “ಪೊಲೀಸರು ಕೊಂದರೂ ಪರವಾಗಿಲ್ಲ. ಕೊಲೆಗಾರ ಎಂಬ ಪಟ್ಟ ಹೊತ್ತುಕೊಳ್ಳಲಾರೆ” ಎಂದು ಖುರೇಷಿ ಖಡಾಖಂಡಿತವಾಗಿ ಹೇಳಿದರು.


ದೇಹದಲ್ಲಿ ಬಲವಿಲ್ಲದೆ ನೆಲದಲ್ಲಿ ಬಿದ್ದುಕೊಂಡಿದ್ದ ಖುರೇಷಿಯನ್ನು ಮೂವರು ಪೊಲೀಸರು ಎದ್ದು ಕೂರಿಸಿದರು. ಇನ್ಸ್ ಪೆಕ್ಟರ್ ಬಂದಿದ್ದಾರೆ ಮಾತನಾಡು ಅಂದರು. ನೀನು ಕಾರ್ತಿಕ್ ರಾಜ್ ಕೊಲೆ ಮಾಡಿದ್ದಿ ಎಂದು ಒಪ್ಪಿಕೊ ಎಂದು ಇನ್ಸ್ ಸ್ಪೆಕ್ಟರ್ ಕೂಡಾ ತಾಕೀತು ಮಾಡಿದರು, ಖುರೇಷಿ ಆಗಲ್ಲ ಎಂದರ್ಥದಲ್ಲಿ ತಲೆ ಅಲ್ಲಾಡಿಸಿದರು. ಅಲ್ಲೇ ಇದ್ದ ಸುತ್ತಿಗೆ ತೆಗೆದುಕೊಂಡ ಇನ್ಸ್ ಸ್ಪೆಕ್ಟರ್ ಖುರೇಷಿಯ ಕಾಲಿಗೆ ಹೊಡೆಯಲಾರಂಬಿಸಿದರು. ಖುರೇಷಿ ಚೀರಾಟ ತಡೆಯಲು ಮತ್ತೊಬ್ಬ ಕಾನ್ಸ್ ಸ್ಟೇಬಲ್ ಖುರೇಷಿಯ ಬಾಯಿಗೆ ಬಟ್ಟೆ ತುರುಕಿದರು. ಸುತ್ತಿಗೆಯಿಂದ ಮಣಿಗಂಟಿಗೆ ನಿರಂತರ ಹೊಡೆತ ಬೀಳುತ್ತಿದ್ದಂತೆ ಖುರೇಷಿ ಪ್ರಜ್ಞೆ ಕಳೆದುಕೊಂಡು ನೆಲದಲ್ಲಿ ಬಿದ್ದುಬಿಟ್ಟರು. ಒಂದು ದೊಡ್ಡ ಐಸ್ ತುಂಡನ್ನು ಗೋಣಿಯಲ್ಲಿ ಎಳೆದುಕೊಂಡು ಬಂದ ಪೊಲೀಸರು ಅದರ ಮೇಲೆ ಖುರೇಷಿಯನ್ನು ಮಲಗಿಸಿದರು.


ಮಂಜುಗಡ್ಡೆಯ ಮೇಲೆ ಪ್ರಜ್ಞಾಹೀನ ಖುರೇಷಿಯನ್ನು ಹಾಕುತ್ತಿದ್ದಂತೆ ಮತ್ತೆ ಪ್ರಜ್ಞೆ ಬಂತು. ಅರ್ಧ-ಒಂದು ಗಂಟೆ ವಿರಾಮ ನೀಡಿದ ಪೊಲೀಸರು ಮತ್ತೆ ಸ್ವಲ್ಪ ಚೇತರಿಸಿಕೊಂಡ ಖುರೇಷಿಯನ್ನು ಟಾಯ್ಲೆಟ್ ಗೆ ಕರೆದುಕೊಂಡು ಹೋದರು. ಟಾಯ್ಲೆಟ್ ನಲ್ಲಿ ಮಂಜುಗಡ್ಡೆಯ ತುಂಡನ್ನು ಇಟ್ಟು ಅದರ ಮೇಲೆ ಮಲಗಿಸಿ ಖುರೇಷಿಯ ಪಾದಗಳಿಗೆ ಹೊಡೆಯಲಾರಂಬಿಸಿದರು. ರಾತ್ರಿಯಿಡೀ ಹೊಡೆದ ಬಳಿಕವೂ ಖುರೇಷಿ ಮರ್ಡರ್ ಮಾಡಿರುವುದನ್ನು ಒಪ್ಪಲೇ ಇಲ್ಲ.
ಮರುದಿನ ಬೆಳಕು ಮೂಡುವ ಮೊದಲೇ ಖುರೇಷಿಯನ್ನು ಮರಳಿ ಸಿಸಿಬಿ ಕಚೇರಿಗೆ ಕರೆತರಲಾಯಿತು. ಅಲ್ಲಿ ಇನ್ಸ್ ಸ್ಪೆಕ್ಟರ್ ಕೊಠಡಿಯ ಎದುರೇ ಇರುವ ಲಾಕಪ್ಪಿನಲ್ಲಿ ಖುರೇಷಿಯನ್ನು ಹಾಕಲಾಯ್ತು. ಪೊಲೀಸನೊಬ್ಬ ಪರೋಟ ಮೊಟ್ಟೆ ಕರಿ ಮತ್ತು ನೀರು ತಂದು ಕೊಟ್ಟ. ಜಜ್ಜಿರುವ ಮುಖ, ತಲೆ, ಮೈಕೈ ನೋವಿನ ಮಧ್ಯೆ ತಿನ್ನೋಕೆ ಎಲ್ಲಿ ಸಾಧ್ಯ ?
ಇನ್ಸ್ ಸ್ಪೆಕ್ಟರ್ ಲಾಕಪ್ಪಿಗೆ ಬಂದರು. “ನಿನಗೆ ಬಾರೀ ಸೊಕ್ಕಾ ? ಹೊರಗಡೆ ಹೊತ್ತಿ ಉರೀತಾ ಇದೆ. ಕಾರ್ತಿಕ್ ಮರ್ಡರ್ ಮಾಡಿದ್ದು ನಾನೇ ಅಂತ ಒಪ್ಪೋಕೆ ಆಗಲ್ವಾ ನಿನಗೆ” ಎಂದು ಲಾಠಿಯಲ್ಲಿ ಮತ್ತೆ ಹೊಡೆದರು. ಇಲ್ಲ, ನಾನಲ್ಲ ಎಂದು ಖುರೇಷಿ ತಲೆ ಅಲ್ಲಾಡಿಸಿದರು.


ಮದ್ಯಾಹ್ನದ ವೇಳೆಗೆ ಖುರೇಷಿಯನ್ನು ಮತ್ತೆ ಅದೇ ಕೋಣೆಗೆ ತರಲಾಯ್ತು. ಮತ್ತೆ ಬೇಂಚಿಗೆ ಕಟ್ಟಿ ಪಾದಗಳಿಗೆ ಹೊಡೆಯಲು ಶುರು ಮಾಡಿದರು. ಏನು ಮಾಡಿದರೂ ಖುರೇಷಿ ಮಾತ್ರ ಕಾರ್ತಿಕ್ ರಾಜ್ ಕೊಲೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಈಗ ಖುರೇಷಿಯ ನಿಕ್ಕರನ್ನು ಜಾರಿಸಿ ಬೆತ್ತಲೆಯಾಗಿ ಬೆಂಚಿನಲ್ಲಿ ಮಲಗಿಸಿದರು. ಎರಡು ವೈರ್ ಇರುವ ಬ್ಯಾಟರಿಯ ಮೋಟಾರ್ ಅನ್ನು ಒಬ್ಬ ಪೊಲೀಸ್ ಸಿಬ್ಬಂದಿ ತಂದು ಕೊಟ್ಟ. ಆ ಮೋಟಾರ್ ವೈರ್ ನ ಮತ್ತೊಂದು ತುದಿಯಲ್ಲಿದ್ದ ಕ್ಲಿಪ್ಪನ್ನು ಖುರೇಷಿಯ ಎದೆಯ ತೊಟ್ಟುಗಳಿಗೆ ಸಿಕ್ಕಿಸಿ ಮೋಟಾರ್ ಆನ್ ಮಾಡಿದರು. ಚಿತ್ರಹಿಂಸೆಯಿಂದ ನರಕಯಾತನೆಯನ್ನು ಖುರೇಷಿ ಅನುಭವಿಸಿದ್ರು. ಅಷ್ಟಾದರೂ ಬಾಯಿ ಬಿಡದೇ ಇದ್ದಾಗ ಮೋಟರಿನ ವಯರ್ ಕ್ಲಿಪ್ಪನ್ನು ಖುರೇಷಿಯ ಗುಪ್ತಾಂಗಕ್ಕೆ ಸಿಕ್ಕಿಸಲಾಯ್ತು. ಈ ಖುರೇಷಿ ಅಕ್ಷರಶಃ ಜೀವಂತ ಶವವಾಗಿದ್ದರು. ಉಸಿರೊಂದಿತ್ತು ಅಷ್ಟೆ.


ಮರುದಿನ ಬೆಳಿಗ್ಗೆ ಎಚ್ಚರಗೊಂಡರೂ ಎದ್ದು ನಿಲ್ಲುವ ಸ್ಥಿತಿಯಲ್ಲಿ ಖುರೇಷಿ ಇರಲಿಲ್ಲ. ಅಷ್ಟರಲ್ಲಾಗಲೇ ಖುರೇಷಿಯಂತಹ ಹಲವು ಮುಸ್ಲಿಂ ಯುವಕರಿಗೆ ಪೊಲೀಸರು ಹೊಡೆಯುತ್ತಿದ್ದರು. ಖುರೇಷಿಯನ್ನು ಎಬ್ಬಿಸಿ ಬಿಳಿ ಖಾಸಗಿ ಕಾರಿನಲ್ಲಿ ನಿಗೂಢ ಸ್ಥಳಕ್ಕೆ ಕೊಂಡೊಯ್ಯಲಾಯ್ತು. ಒಂದು ಬಂಗಲೆಗೆ ಕೊಂಡೊಯ್ದು ಅಲ್ಲಿ ಬೇರೊಂದು ಪೊಲೀಸ್ ತಂಡಕ್ಕೆ ಖುರೇಷಿಯನ್ನು ಹಸ್ತಾಂತರಿಸಿದರು. ಖುರೇಷಿಗೆ ಮತ್ತೆ ಶುರುವಿನಿಂದ ವಿಚಾರಣೆ ಪ್ರಾರಂಭವಾಯ್ತು. ವಿಚಾರಣೆಯೆಂದರೆ ಕಾರ್ತಿಕ್ ರಾಜ್ ಕೊಲೆ ಮಾಡಿದ್ದು ಹೌದೋ ಅಲ್ಲವೋ ಎಂಬ ಪ್ರಶ್ನೆಯಲ್ಲ. ವಿಚಾರಣೆಯೆಂದರೆ ಅದೇ ಹೊಡೆದ, ಶಾಕ್ ಟ್ರೀಟ್ಮೆಂಟ್ ಮತ್ತು ಒಪ್ಪಿಕೋ ಎಂಬ ಒತ್ತಡ.
ಖುರೇಷಿಗೆ ಮೂತ್ರ ಬರುತ್ತದೆ. ಮೂತ್ರ ಮಾಡಲು ಹೋದರೆ ರಕ್ತವೇ ಹೊರಬರುತ್ತದೆ. ಮೂತ್ರ ಕೆಂಪು ಕೆಂಪಾಗಿ ಹೋಗುತ್ತಿದೆ ಎಂದು ಪೊಲೀಸರಿಗೆ ಹೇಳಿದರೆ, ಏನಾಗಲ್ಲ ಸುಮ್ಮನೆ ಬಿದ್ಕೊಂಡಿರು ಅಂದರು. ಮತ್ತೆ ಬಂದ ಇನ್ಸ್ ಸ್ಪೆಕ್ಟರ್ ಮತ್ತೆ ಹೊಡೆಯಲು ಶುರು ಮಾಡಿದರು. ಖುರೇಷಿಗೆ ಎದೆ ನೋವು ಶುರುವಾಯ್ತು. ಪೊಲೀಸರೇ ಯಾವುದೋ ಮಾತ್ರೆಯನ್ನು ಬಾಯಿಗೆ ಹಾಕಿ ನುಂಗಿಸಿದರು. ಅದ್ಯಾವುದೋ ಇಂಜೆಕ್ಷನ್ ಅನ್ನು ಪೊಲೀಸರೇ ತೋಳಿಗೆ ಚುಚ್ಚಿದರು.


ಪೊಲೀಸರು ವಿಚಾರಣೆಗೆ ಎಂದು ಕರೆದುಕೊಂಡು ಹೋಗಿ ಬಿಡುಗಡೆ ಮಾಡದೇ ಇದ್ದಾಗ ಅಹ್ಮದ್ ಖುರೇಷಿ ಮನೆಯವರು ಠಾಣೆಗೆ ಹೋಗುತ್ತಾರೆ. ನೋಡಿದರೆ ಠಾಣೆಯಲ್ಲೂ ಅಹಮ್ಮದ್ ಖುರೇಷಿ ಇಲ್ಲ. ಎಲ್ಲಿದ್ದಾರೆ ಕೇಳಿದರೆ ಉತ್ತರವಿಲ್ಲ. ಬೇರೆ ದಾರಿಯಿಲ್ಲದೆ ಅಹಮ್ಮದ್ ಖುರೇಷಿ ಮನೆಯವರು ವಕೀಲರನ್ನು ಸಂಪರ್ಕಿಸುತ್ತಾರೆ. ವಕೀಲರು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಗೆ ಮನವಿ ಮಾಡುತ್ತಾರೆ. ಸರ್ಚ್ ವಾರೆಂಟ್ ಜಾರಿಯಾಗಿ ವಕೀಲರೊಬ್ಬರನ್ನು ಕೋರ್ಟ್ ಅಧಿಕಾರಿಯಾಗಿ ನೇಮಿಸಲಾಗುತ್ತದೆ. ಆ ಬಳಿಕ ಕೇಸ್ ವೇಗ ಪಡೆಯುತ್ತಿಲ್ಲ ಎಂದು ಕುಟುಂಬಸ್ಥರು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಗೆ ಕೇಸ್ ಹಸ್ತಾಂತರಿಸುತ್ತಾರೆ.


ದಿನೇಶ್ ಹೆಗ್ಡೆ ಉಳೆಪಾಡಿಯವರಿಗೆ ಕೇಸ್ ಹಸ್ತಾಂತರ ಆಗಿದೆ ಎಂದು ತಿಳಿಯುತ್ತಲೇ ಸಿಸಿಬಿ ಅಕ್ರಮ ಬಂಧನದಲ್ಲಿ ಜೀವಂತ ಶವವಾಗಿದ್ದ ಖುರೇಷಿಯನ್ನು ಎಬ್ಬಿಸಿ ಕೂರಿಸಲಾಗುತ್ತದೆ. ಅವರಿಗೆ ಬೇಕಾದ ಇಂಜೆಕ್ಷನ್, ಮಾತ್ರೆಗಳನ್ನು ನೀಡಿ ಮೈತುಂಬಾ ಏಟಿನಿಂದಾದ ಕೀವುಗಳಿಗೆ ಗುಂಡುಪಿನ್ನು ಚುಚ್ಚಿ ತೆಗೆಯಲಾಗುತ್ತದೆ. ಒಬ್ಬ ಪೋಲೀಸ್ ಸಿಬ್ಬಂದಿ ಖುರೇಷಿಯನ್ನು ಟಾಯ್ಲೆಟ್ ಗೆ ಕರೆದುಕೊಂಡು ಹೋಗಿ ಕಾಲಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ಹಾಕಲು ಕಾಲಿಗೆ ಗೀರಿದ. “ನೋಡು ನಿನ್ನನ್ನು ಈಗ ಬಿಡುಗಡೆ ಮಾಡ್ತೀವಿ. ಆದ್ರೆ ಸುಮ್ಮನೆ ಬಿಡುಗಡೆ ಮಾಡೋದು ತಪ್ಪಾಗುತ್ತೆ. ಹಾಗಾಗಿ ಸಣ್ಣ ಪಿಟ್ಟಿ ಕೇಸ್ ಹಾಕ್ತೀವಿ. ಕೋರ್ಟ್ ಗೆ ಹಾಜರುಪಡಿಸುವಾಗ ಪೊಲೀಸರು ಹೊಡೆದಿದ್ದಾರಾ ಎಂದು ಕೇಳುತ್ತಾರೆ. ಇಲ್ಲ ಎನ್ನಬೇಕು. ಇದೇನು ಗಾಯಗಳು ಎಂದು ಪ್ರಶ್ನಿಸಿದರೆ, ಪೊಲೀಸರು ಬಂದಾಗ ತಪ್ಪಿಸಿಕೊಳ್ಳಲು ಹೋಗಿ ಅ್ಯಕ್ಸಿಡೆಂಟ್ ಆಯ್ತು ಅನ್ನಬೇಕು. ಇಲ್ಲಾಂದ್ರೆ ಮತ್ತೆ ಗೊತ್ತಲ್ಲಾ” ಎನ್ನುತ್ತಾರೆ ಪೊಲೀಸರು.


ಖುರೇಷಿಯನ್ನು ಮತ್ತೆ ಬಿಳಿ ಕಾರಿನಲ್ಲಿ ಕೂರಿಸಿ ಸುರತ್ಕಲ್ ಪೊಲೀಸರ ವಶಕ್ಕೆ ನೀಡಲಾಗುತ್ತದೆ. ಆಗಷ್ಟೆ ಬಂಧನ ಮಾಡಲಾಗಿದೆ ಎಂದು ದಾಖಲೆಯಲ್ಲಿ ತೋರಿಸಿ ಪಿಟ್ಟಿಕೇಸ್ ಹಾಕಲಾಗುತ್ತದೆ.
ಇತ್ತ ಕೇಸ್ ಪಡೆದುಕೊಂಡು ಸರ್ಚ್ ವಾರೆಂಟ್ ಪಡೆದುಕೊಂಡ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಯವರು “ಅಹ್ಮದ್ ಖುರೇಷಿ ಮೇಲೆ ಇರುವ ಕೇಸ್ ಕಾರಣ, ಹಿನ್ನೆಲೆಯನ್ನು” ವಿವರಿಸುತ್ತಾರೆ. ತಕ್ಷಣ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಒತ್ತಾಯಿಸುತ್ತಾರೆ. ಖುರೇಷಿ ನಡೆಯಲಾಗದ ರೀತಿಯಲ್ಲಿ ಕೋರ್ಟ್ ಗೆ ಬರುತ್ತಾರೆ. ಕಾರ್ತಿಕ್ ಕೊಲೆ ಕೇಸಲ್ಲಿ ಅಮಾಯಕ ಖುರೇಷಿಗೆ ಪೊಲೀಸರು ಅತ್ಯಂತ ಅಮಾನವೀಯ ಹಲ್ಲೆ ನಡೆಸಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ದಿನೇಶ್ ಹೆಗ್ಡೆ ಉಳೆಪಾಡಿ ಅರ್ಜಿ ಹಾಕುತ್ತಾರೆ. ಕೋರ್ಟ್ ಅದನ್ನು ಪುರಸ್ಕರಿಸಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುತ್ತದೆ.


ಇಷ್ಟಕ್ಕೇ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಸುಮ್ಮನೆ ಕೂರುವುದಿಲ್ಲ. ವೈದ್ಯಕೀಯ ದಾಖಲೆಗಳನ್ನು ಅಧ್ಯಯನ ಮಾಡಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅಹ್ಮದ್ ಖುರೇಷಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ಕಾಲ ಕಳೆಯುತ್ತಾರೆ. ಪೊಲೀಸರ ಬೂಟಿನೇಟು, ಲಾಠಿ ಏಟು, ಕರೆಂಟ್ ಶಾಕ್, ನೀರು ಕೊಡದೇ ಹಲ್ಲೆ ನಡೆಸಿದ್ದರಿಂದ ಅಹ್ಮದ್ ಖುರೇಷಿಯ ಕಿಡ್ನಿಗೆ ಹಾನಿಯಾಗಿದೆ ಎಂಬ ಶಾಕಿಂಗ್ ಮಾಹಿತಿ ದಿನೇಶ್ ಹೆಗ್ಡೆಯವರಿಗೆ ತಿಳಿಯುತ್ತದೆ. ಇಡೀ ಪ್ರಕರಣವನ್ನು ಸ್ಥಳೀಯ ಪೊಲೀಸರಿಂದ ಸಿಐಡಿಗೆ ವರ್ಗಾಯಿಸಬೇಕು ಎಂದು ಕೋರ್ಟ್ ಗೆ ಒತ್ತಾಯಪಡಿಸುತ್ತಾರೆ. ಜೊತೆಗೆ ಖುರೇಷಿಗೆ ಪೊಲೀಸ್ ಹಲ್ಲೆಯಿಂದ ಕಿಡ್ನಿ ಫೇಲ್ ಆಗಿರುವುದರಿಂದ ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. ಕೋರ್ಟ್ ವಾದ ವಿವಾದ ಆಲಿಸಿ, ಖಾಸಗಿ ಆಸ್ಪತ್ರೆಗೆ ಯಾಕೆ ದಾಖಲಿಸಬೇಕು ? ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕಿಡ್ನಿ ಚಿಕಿತ್ಸೆ ಸೌಲಭ್ಯ ಇಲ್ಲವೇ ? ಎಂದು ಪ್ರಶ್ನಿಸಿ ವೆನ್ಲಾಕ್ ವೈದ್ಯಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುತ್ತಾರೆ. ವೆನ್ಲಾಕ್ ವೈದ್ಯಾಧಿಕಾರಿಗಳು ತಮ್ಮ ವರದಿಯಲ್ಲಿ “ಕಿಡ್ನಿ ಹಾನಿ ಚಿಕಿತ್ಸೆಗೆ ನಮ್ಮಲ್ಲಿ ಸೌಲಭ್ಯವಿಲ್ಲ” ಎಂದು ಹೇಳುತ್ತಾರೆ. ಡಾಕ್ಟರ್ ವರದಿ ನೋಡಿದ ನ್ಯಾಯಾಧೀಶರು ಶಾಕ್ ಗೆ ಒಳಗಾಗುತ್ತಾರೆ. ಕಿಡ್ನಿ ಚಿಕಿತ್ಸೆಯ ಸೌಲಭ್ಯ ಇಲ್ಲ ಎಂದು ಗೊತ್ತಿದ್ದರೂ ಕೋರ್ಟ್ ಕೇಳುವವರೆಗೆ ವೈದ್ಯರು ಯಾಕೆ ಹೇಳಲಿಲ್ಲ ? ಎಂದು ಆತಂಕ, ಅಸಮಾದಾನ ವ್ಯಕ್ತಪಡಿಸಿ “ಅಹಮ್ಮದ್ ಖುರೇಷಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವುದು” ಎಂದು ಆದೇಶ ಹೊರಡಿಸುತ್ತದೆ.


ಅಹಮ್ಮದ್ ಖುರೇಷಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಿಡ್ನಿ ಚಿಕಿತ್ಸೆ ಪ್ರಾರಂಭವಾಗುತ್ತದೆ. ಈ ಮಧ್ಯೆ ಪೊಲೀಸ್ ರ ಕರೆಂಟ್ ಶಾಕ್ ಟ್ರೀಟ್ಮೆಂಟಿನಿಂದಾಗ ಅಹ್ಮದ್ ಖುರೇಷಿ ಎಂಬ ಅಮಾಯಕ ಮುಸ್ಲಿಂ ಯುವಕನ ಕಿಡ್ನಿಗೆ ಹಾನಿಯಾಗಿದೆ ಎಂದು ಗೊತ್ತಾಗಿ ಮುಸ್ಲಿಂ ಸಮುದಾಯ ಭಾರೀ ಪ್ರತಿಭಟನೆ ನಡೆಸುತ್ತದೆ. ಪ್ರತಿಭಟನೆಯ ಮೇಲೂ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಾರೆ. ಅಷ್ಟರಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರಿಂದ, ಹಿರಿಯ ಪೊಲೀಸ್ ಅಧಿಕಾರಿ ವೆಲೆಂಟೈನ್ ಡಿಸೋಜಾರಿಗೆ ಕಾರ್ತಿಕ್ ಕೊಲೆ ಕೇಸ್ ವಿಚಾರಣೆಯನ್ನು ತನಿಖೆಗೆ ವಹಿಸಲಾಗುತ್ತದೆ.


ವೆಲೈಂಟೈನ್ ಡಿಸೋಜಾ ತನಿಖೆಯಲ್ಲಿ ಮೃತ ಕಾರ್ತಿಕ್ ರಾಜ್ ಅವರ ತಂಗಿ ಮತ್ತು ಪ್ರಿಯಕರ ಜೊತೆಯಾಗಿ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಬಯಲಾಗುತ್ತದೆ. ತನ್ನ ಪ್ರೀತಿಗೆ ಅಣ್ಣ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ತಂಗಿಯೇ ಕಾರ್ತಿಕ್ ರಾಜ್ ನನ್ನು ಕೊಲೆ ನಡೆಸಿದ್ದ ಪ್ರಕರಣ ಇದಾಗಿರುತ್ತದೆ. ಈ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಪೊಲೀಸರ ಮೇಲೆ ಬೆಂಕಿ ಒತ್ತಡ ಹಾಕಿದ್ದರಿಂದ ಮೊದಲೇ ಕೋಮುವಾದಿಯಾಗಿದ್ದ ಪೊಲೀಸರು ನೂರಕ್ಕೂ ಹೆಚ್ಚು ಮುಸ್ಲೀಮರ ಮೇಲೆ ಥರ್ಡ್ ಡಿಗ್ರಿ ದೌರ್ಜನ್ಯ ಮಾಡುತ್ತಾರೆ. ಅಮಾಯಕ ಅಹ್ಮದ್ ಖುರೇಷಿಯ ಕಿಡ್ನಿಗೆ ಹಾನಿಯಾಗುವಷ್ಟರ ಮಟ್ಟಿಗೆ ನೀರೂ ಕೊಡದೇ ವಾರಗಟ್ಟಲೆ ಕರೆಂಟ್ ಶಾಕ್ ನಂತಹ ಅಮಾನವೀಯ ಹಲ್ಲೆ ಮಾಡುತ್ತಾರೆ. ಈಗ ದಿನೇಶ್ ಹೆಗ್ಡೆ ಉಳೆಪಾಡಿಯಂತಹ ವಕೀಲರಿಂದಾಗಿ ಅಹ್ಮದ್ ಖುರೇಷಿ ಮತ್ತು ನೂರಾರು ಮುಸ್ಲಿಂ ಯುವಕರು ದೋಷ ಮುಕ್ತರಾಗಿ ಕಾಲ ಮೇಲೆ ಕಾಲು ಹಾಕಿ ಪತ್ರಿಕೆ ಓದುವಂತಾಗಿದೆ.

(ಈ ಪ್ರಕರಣವನ್ನು ನಾನು ಫಾಲೋಅಪ್ ಮಾಡುತ್ತಿದ್ದೆ. ಪೊಲೀಸರು ನಡೆಸಿದ ಅಮಾನವೀಯ ಹಲ್ಲೆಯ ಮಾಹಿತಿಯನ್ನು ಕೋರ್ಟ್ ದಾಖಲೆಗಳು, ಜಿಲ್ಲಾ ಸೆಶನ್ ಮತ್ತು ಮಾನವ ಹಕ್ಕು ನ್ಯಾಯಾಲಯಕ್ಕೆ ಸಿದ್ದಪಡಿಸಿದ್ದ ದಾಖಲೆಗಳು ಮತ್ತು ದೂರುಗಳ ಪ್ರತಿ ಆಧಾರದಲ್ಲಿ ಬರೆಯಲಾಗಿದೆ)

(ನವೀನ್ ಸೂರಿಂಜೆ ಫೇಸ್ಬುಕ್ ವಾಲ್ ನಿಂದ)

Join Whatsapp
Exit mobile version