ಬೆಂಗಳೂರು: ಹೈಕೋರ್ಟಿನ ಮಧ್ಯಂತರ ಆದೇಶವು ಕೇವಲ ಕಾಲೇಜಿಗೆ ಸೀಮಿತವೆಂದು ಸ್ಪಷ್ಟವಾಗಿದ್ದರೂ ಪ್ರೌಢಶಾಲೆಗಳಲ್ಲಿ ಅದನ್ನು ಹೇರಿ ಮಕ್ಕಳಲ್ಲಿ ಆತಂಕ ಸೃಷ್ಟಿಸುತ್ತಿರುವುದು ಸರಿಯಲ್ಲ. ಪ್ರೌಢಶಾಲೆಗಳಲ್ಲಿ ಹೆಚ್ಚುತ್ತಿರುವ ಕಿರುಕುಳ, ಅವಮಾನಗಳು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಪಾಲಿಗೆ ಶಾಲಾ ವಾತಾವರಣವನ್ನು ಅಸುರಕ್ಷಿತವನ್ನಾಗಿಸಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್, ಕರ್ನಾಟಕ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆರೋಗ್ಯಕರ ಸಮಾಜದ ಬುನಾದಿಯಾಗಿರುವ ಶಾಲಾಂಗಣದಲ್ಲಿ ಇಂದು ಧಾರ್ಮಿಕ ಅಸಹಿಷ್ಣುತೆಯು ತಾಂಡವವಾಡುತ್ತಿದ್ದು ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಗೂ ಸಮಾಜದ ಸಾಮರಸ್ಯಕ್ಕೆ ಕಂಟಕವಾಗಿದೆ. ಮತ್ತೊಮ್ಮೆ, ರಾಜ್ಯದ ಶಾಂತಿ ಕದಡದಂತೆ ಎಚ್ಚರ ವಹಿಸುತ್ತಾ ಹೈಕೋರ್ಟಿನ ಆದೇಶಕ್ಕೆ ವಿಧೇಯರಾಗಿ ಸಂಬಂಧಪಟ್ಟ ಇಲಾಖೆಯು ತಪ್ಪಿತಸ್ಥರ ವಿರುದ್ಧ ಸ್ವಯಂಪ್ರೇರಿತ ಕಾನೂನುಕ್ರಮ ಕೂಡಲೇ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.