Home ಟಾಪ್ ಸುದ್ದಿಗಳು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಆರ್.ಎಸ್.ಎಸ್‌. ಶಾಖೆಯಂತಾಗಿದೆ: SDPI

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಆರ್.ಎಸ್.ಎಸ್‌. ಶಾಖೆಯಂತಾಗಿದೆ: SDPI

“ಬೆಂಗಳೂರು ಮದರಸಾ ಪ್ರಕರಣ ಅದಕ್ಕೆ ಉದಾಹರಣೆ”

ಬೆಂಗಳೂರು: ರಾಷ್ಟ್ರೀಯ ಮಕ್ಕಳ ಆಯೋಗ ದೇಶದಲ್ಲಿ ಮಕ್ಕಳ ಮೇಲೆ ನಡೆಯಬಹುದಾದ ಯಾವುದೇ ದೈಹಿಕ ಅಥವಾ ಮಾನಸಿಕ ಕಿರುಕುಳ, ಶೋಷಣೆ, ದೌರ್ಜನ್ಯಗಳ ವಿರುದ್ಧ ರಕ್ಷಣೆ ನೀಡಲು ಅಸ್ತಿತ್ವದಲ್ಲಿರುವ ಸಂಸ್ಥೆ. ಅಂತಹ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಆರ್.ಎಸ್.ಎಸ್‌. ಶಾಖೆಯಂತಾಗಿದ್ದು, ಮುಸ್ಲಿಂ ಮಕ್ಕಳನ್ನು ಅವಮಾನಿಸುವ, ಥಳಿಸುವಂತಹ ನೀಚತನ ಪ್ರದರ್ಶಿಸುತ್ತಿದೆ. ಬೆಂಗಳೂರಿನ ಮದರಸಾದಲ್ಲಿ ಮಸ್ಲಿಂ ಬಾಲಕಿಯರನ್ನು ಅನವಶ್ಯಕ ಪ್ರಶ್ನೆಗಳ ಮೂಲಕ ಅವಮಾನಿಸಿದ ಮತ್ತು ಮಗುವೊಂದನ್ನು ಥಳಿಸಿದ ಪ್ರಕರಣ ಅದಕ್ಕೆ ಉದಾಹರಣೆಯಾಗಿದೆ ಎಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಕಿಡಿ ಗಾರಿದ್ದಾರೆ.

ಮೋದಿ ನೇತೃತ್ವದ ಫ್ಯಾಸಿಸ್ಟ್‌ ಮನಸ್ಥಿತಿಯ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಎಲ್ಲ ಸಂಸ್ಥೆಗಳಲ್ಲಿ ಅಸಮಾನತೆಯನ್ನು ಪ್ರತಿಪಾದಿಸುವ, ಅಲ್ಪಸಂಖ್ಯಾತರನ್ನು ದ್ವೇಷಿಸುವ ಕೋಮುವಾದಿ ಆರ್.ಎಸ್.ಎಸ್‌. ಹಿನ್ನೆಲೆಯ ವ್ಯಕ್ತಿಗಳನ್ನು ಮುಖ್ಯ ಸ್ಥಾನಗಳಲ್ಲಿ ತಂದು ಕೂರಿಸುವ ಕೆಲಸ ಮಾಡಲಾಗುತ್ತಿದೆ. ದಿನ ಬೆಳಗಾದರೆ ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಖ್ಯವಾಗಿ ಮುಸ್ಲಿಮರನ್ನು ಸಮಾಜದಲ್ಲಿ ಕೆಟ್ಟದಾಗಿ ಬಿಂಬಿಸುವ ಮತ್ತು ಅವರನ್ನು ನಿರಂತರ ಕಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಅಶ್ವತ್ಥನಗರ ಹೆಣ್ಣುಮಕ್ಕಳ ವಸತಿ ಮದರಸಾಕ್ಕೆ ಭೇಟಿ ನೀಡಿರುವ ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌)ದ ತಂಡ ಅಲ್ಲಿನ ಹೆಣ್ಣುಮಕ್ಕಳಲ್ಲಿ “ನೀನು ಮದುವೆಯಾಗಿ ಕುವೈತ್‌, ದುಬೈಗೆ ಹೋಗ್ತೀಯಾ ಮದುವೆಯಾಗುವೆಯಾ?” ಎಂದೆಲ್ಲ ಅಲ್ಲಿನ ಮಕ್ಕಳನ್ನು ಕೇಳುವ ಮೂಲಕ ಮಕ್ಕಳನ್ನು ಮಾನಸಿಕವಾಗಿ ಹಿಂಸಿಸಿದ್ದೇ ಅಲ್ಲದೆ, ಒಂದು ಮಗುವನ್ನು ಹೊಡೆದಿರುವುದಾಗಿ ಮಗುವೊಂದು ಆರೋಪಿಸಿದೆ. ಅಷ್ಟೇ ಅಲ್ಲದೆ, ಅಲ್ಲಿನ ಪೊಲೀಸ್ ಠಾಣೆಗೆ ತೆರಳಿದ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ “ಈ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಟೋರಿಯಸ್ ಚಟುವಟಿಕೆಗಳು ನಡೆಯುತ್ತಿವೆ. ಅನಧಿಕೃತ ಅನಾಥಾಶ್ರಮಕ್ಕೆ ನಾವು ಹೋಗಿದ್ದೆವು. ಹೆಣ್ಣುಮಕ್ಕಳನ್ನು ನೋಡಿದೆವು. ಈ ಮಕ್ಕಳನ್ನು ಗಲ್ಫ್ ರಾಷ್ಟ್ರಗಳ ಗಂಡಸರಿಗೆ ಮದುವೆ ಮಾಡಲಾಗುತ್ತಿದೆ” ಎಂದು ಸಂವೇದನಾರಹಿತವಾಗಿ ಮಾತನಾಡಿದ್ದರೆ. ಇದು ದ್ವೇಷ ತುಂಬಿದ ನೀಚ ವರ್ತನೆ ಎಂದು ಮಜೀದ್‌ ತಮ್ಮ ಪ್ರಕಟಣೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಮಕ್ಕಳ ರಕ್ಷಣೆಗೆಂದು ಇರುವ ಸಂಸ್ಥೆಯೇ ಧರ್ಮದ ಕಾರಣಕ್ಕೆ ಮಕ್ಕಳ ಮೇಲೆ ಈ ರೀತಿಯ ದೌರ್ಜನ್ಯ ಎಸಗುತ್ತದೆ ಎಂದರೆ ಇದು ನಾಚಿಕೆಗೇಡಿನ ಸಂಗತಿ. ಈ ಪ್ರಕರಣ ದೇಶದಲ್ಲಿ ಸರ್ಕಾರಿ ಸಂಸ್ಥೆಗಳು ಕೂಡ ದ್ವೇಷದ ಅಮಲಿನಲ್ಲಿ ತೇಲುತ್ತಿವೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದು ಮಕ್ಕಳ ವಿರುದ್ಧ ದೌರ್ಜನ್ಯದ ಗಂಭೀರ ಪ್ರಕರಣ. ಸರ್ಕಾರ ತಕ್ಷಣ ಈ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ನೀಚ ಕೃತ್ಯಗಳು ಮುಂದಿನ ದಿನಗಳನ್ನು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮಜೀದ್‌ ಒತ್ತಾಯಿಸಿದ್ದಾರೆ.

Join Whatsapp
Exit mobile version