ಚಿಕ್ಕಬಳ್ಳಾಪುರ: ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿವೆ. ಇಷ್ಟೂ ಕ್ಷೇತ್ರಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಎನ್‌ಡಿಎ ಅಭ್ಯರ್ಥಿ. ಅಭ್ಯರ್ಥಿಗಳ ಹೆಸರು ಅಂತಿಮವಾಗುವವರೆಗೂ ನಾವು ಮೋದಿ ಹೆಸರನ್ನೇ ಹೇಳಬೇಕು. ಮೈತ್ರಿ ಪಕ್ಷಗಳ ನಾಯಕರು ಯಾರನ್ನು ಅಂತಿಮಗೊಳಿಸಿ ಅಭ್ಯರ್ಥಿ ಮಾಡುತ್ತಾರೊ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಮಾಜಿ ಸಚಿವ ಡಾ| ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ರವಿವಾರದ ನನ್ನ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಅವರು ರವಿವಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನೇ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಮ್ಮ ಪುತ್ರನಿಗೆ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಕೊಡಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸುಧಾಕರ್, ನಾನು ವರಿಷ್ಠರನ್ನು ಭೇಟಿಯಾಗಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಬಿರಿಯಾನಿ ಊಟ ಹಾಕಿಸಿ, ತಿರುಪತಿಗೆ ಪ್ರವಾಸ ಕರೆದುಕೊಂಡು ಹೋಗಿ ಟಿಕೆಟ್ ಕೇಳುವ ಅಗತ್ಯ ನನಗಿಲ್ಲ. ನನ್ನ ಕೆಲಸವೇ ನನಗೆ ಶ್ರೀರಕ್ಷೆ ಎಂದಿದ್ದಾರೆ.