Home ಕರಾವಳಿ ನಳಿನ್ ಕುಮಾರ್ ಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನು ಸೂಚಿಸುವ ನೈತಿಕತೆ ಇಲ್ಲ: ಹರೀಶ್ ಕುಮಾರ್

ನಳಿನ್ ಕುಮಾರ್ ಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನು ಸೂಚಿಸುವ ನೈತಿಕತೆ ಇಲ್ಲ: ಹರೀಶ್ ಕುಮಾರ್

ಮಂಗಳೂರು: ಕಾಂಗ್ರೆಸ್‌ನಲ್ಲಿ 2023ರ ಚುನಾವಣೆಗೆ ದಲಿತ ಸಿಎಂ ಅಭ್ಯರ್ಥಿಯಾಗಿ ಮಲ್ಲಿಕಾಜುನ ಖರ್ಗೆ ಅವರನ್ನು ಘೋಷಿಸಿ ಎಂಬ ಹೇಳಿಕೆಯನ್ನು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್‌ನಲ್ಲಿ ಯಾರನ್ನು ಸಿಎಂ ಆಗಿ ಘೋಷಿಸಬೇಕು ಎಂದು ಹೇಳುವ ನೈತಿಕತೆ ಇಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‌ಸಿ ಹರೀಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲಾ ವರ್ಗದವರಿಗೂ ಸಿಎಂ ಆಗುವ ಅವಕಾಶವನ್ನು ನೀಡಿದೆ ಆದರೆ ಇತ್ತೀಚೆಗೆ ಬಿಜೆಪಿಯಲ್ಲಿ ಸಿಎಂ ಆದವರು ಬಿಎಸ್‌ವೈ ಹಾಗೂ ಜಗದೀಶ್ ಶೆಟ್ಟರ್ ಇಬ್ಬರೂ ಲಿಂಗಾಯಿತ ವರ್ಗದವರು ಹಾಗೂ ಕೇವಲ 11 ತಿಂಗಳು ಒಕ್ಕಲಿಗ ಸಮುದಾಯದ ಡಿವಿಎಸ್ ಆಳ್ವಿಕೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಸಮುದಾಯಕ್ಕೂ ಸಿಎಂ ಆಗಿ ಅವಕಾಶವನ್ನು ನೀಡಿಲ್ಲ. ದೇಶದಲ್ಲಿ 23 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಎಷ್ಟು ರಾಜ್ಯಗಳಲ್ಲಿ ದಲಿತ ಸಿಎಂ ಇದ್ದಾರೆ ಎಂದು ಪ್ರಶ್ನಿಸಿದರು.

2023ರಲ್ಲಿ ನಡೆಯುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರಿಗೆ ತಿಳಿದಿದ್ದು, ಆದುದರಿಂದಲೇ ರಾಜ್ಯಾಧ್ಯಕ್ಷರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯಾಧ್ಯಕ್ಷರು ದ.ಕ. ಜಿಲ್ಲೆಯ ಸಂಸದರೂ ಆಗಿದ್ದು, ಜಿಲ್ಲೆಯಲ್ಲಿ ಪ್ರತೀ ವರ್ಷ ಮಳೆಗೆ ರೈಲ್ವೆ ರಸ್ತೆಗೆ ಮಣ್ಣು ಕುಸಿಯುತ್ತಿದೆ. 10 ವರ್ಷಗಳ ಕಾಲ ಕೆಲಸ ಮಾಡಿ ನಂತರ ಉದ್ಘಾಟನೆಯಾದ ಪಂಪ್‌ವೆಲ್ ಮೇಲ್ಸೆತುವೆಯ ಸರ್ವಿಸ್ ರಸ್ತೆ ಅಸಮರ್ಪಕವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿ ದೋಣಿಯಲ್ಲಿ ಸಂಚರಿಸುವ ರೀತಿಯಲ್ಲಿ ಇರುತ್ತದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಸಂಸದರ ಸುಪರ್ದಿಗೆ ಬರುತ್ತಿದ್ದು, ಅವರು ಈ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಿ ಜನರ ಆತಂಕವನ್ನು ದೂರ ಮಾಡಬೇಕು ಎಂದು ಎಚ್ಚರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೋಸಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಅವಮಾನಿಸಿದ್ದಾರೆ. ನುಡಿದಂತೆ ನಡೆದವರು, ದಿಟ್ಟ, ನೇರ, ಮೇದಾವಿ, ಆರ್ಥಿಕ ತಜ್ಞರು ಸಿದ್ದರಾಮಯ್ಯರು ಅವರು 5 ವರ್ಷ ಆಡಳಿತ ನಡೆಸಿದಾಗ ರಾಜ್ಯದ ಆರ್ಥಿಕತೆಯನ್ನು ಉಳಿಸಿದವರು. ಅವರು ಜನರ ನಂಬಿಕೆಗೆ ಅರ್ಹರಾದವರು. ಬಿಜೆಪಿ ರಾಜಕರಣ ಮಾಡಿ, ಎಲ್ಲದಕ್ಕೂ ತೆರಿಗೆ ಹಾಕಿ ಜನರ ನಂಬಿಕೆಯ ವಿರುದ್ಧ ಹೋಗಿದೆ ಎಂದು ದೂರಿದರು.

ಈ ವೇಳೆ ಪ್ರಮುಖರಾದ ಸದಾಶಿವ ಉಳ್ಳಾಲ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಗಣೇಶ್ ಪೂಜಾರಿ, ಶುಭೋದಯ ಆಳ್ವ, ಸುರೇಶ್ ಕೋಟೆಕಾರ್, ಅಭಿಷೇಕ್ ಉಳ್ಳಾಲ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version