Home ಟಾಪ್ ಸುದ್ದಿಗಳು KSRTC ಅಧಿಕಾರಿಗಳಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದ ದಂಪತಿ ಬಂಧನ

KSRTC ಅಧಿಕಾರಿಗಳಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದ ದಂಪತಿ ಬಂಧನ

ಸಾಂದರ್ಭಿಕ ಚಿತ್ರ

ಮೈಸೂರು: ‘KSRTC ಅಧಿಕಾರಿಗಳಿಗೆ ಮಾರಕಾಸ್ತ್ರ ತೋರಿಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌, “ಆರೋಪಿ ಶಫೀಕ್ ಅಹ್ಮದ್ 12 ವರ್ಷಗಳ ಅವಧಿಗೆ ವಾಣಿಜ್ಯ ಸಂಕೀರ್ಣವೊಂದನ್ನು ಬಾಡಿಗೆಗೆ ಪಡೆದಿದ್ದು, ₹1.89 ಕೋಟಿ ಬಾಡಿಗೆ ಪಾವತಿ ಮಾಡಿರಲಿಲ್ಲ. ಕಟ್ಟಡ ತೆರವುಗೊಳಿಸಲು ಡಿ.10ರ ಶನಿವಾರ ವಿಭಾಗೀಯ ಸಾರಿಗೆ ಅಧಿಕಾರಿ ಮರೀಗೌಡ ಅವರು ಸಿಬ್ಬಂದಿಯೊಂದಿಗೆ ತೆರಳಿದ್ದಾಗ, ಬಾಡಿಗೆದಾರ ಶಫೀಕ್ ಅಹ್ಮದ್, ಆತನ ಪತ್ನಿ ಹಾಗೂ ಮೂವರು ಮಹಿಳೆಯರು ಬೆದರಿಕೆ ಹಾಕಿದ್ದರು” ಎಂದು ಹೇಳಿದ್ದಾರೆ.

‘ಮಚ್ಚು ತೋರಿಸಿ ಕತ್ತರಿಸಿ ಬಿಡುವುದಾಗಿ ಕೊಲೆ ಬೆದರಿಕೆ ಹಾಕುತ್ತಿರುವ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿ ಮರೀಗೌಡ ಉದಯಗಿರಿ ‍ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು’ ಎಂದು ಬಾನೋತ್ ತಿಳಿಸಿದ್ದಾರೆ.  

‘ದಂಪತಿ ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಗುರುವಾರ ರಾತ್ರಿ ದಂಪತಿಯನ್ನು ವಿರಾಜಪೇಟೆ ಸಮೀಪ ಬಂಧಿಸಲಾಗಿದೆ. ಇಬ್ಬರ ಮೇಲೂ ರೌಡಿಶೀಟ್ ತೆರೆದು, ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಜೊತೆಯಲ್ಲಿದ್ದ ಮೂವರನ್ನು ಗುರುತಿಸಿ ವಶಕ್ಕೆ ಪಡೆಯುವ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅವರು ಮಾಹಿತಿ ನೀಡಿದರು.

‘ಕಾರ್ಯಾಚರಣೆಯಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್‌.ಶಶಿಧರ್‌ ನೇತೃತ್ವದಲ್ಲಿ ಉದಯಗಿರಿ ಠಾಣೆ ಇನ್‌ಸ್ಪೆಕ್ಟರ್ ಪಿ.ಕೆ.ರಾಜು, ಎಸ್‌ಐ ಸುನಿಲ್‌, ರಾಜು, ರೂಪೇಶ್‌, ಸಿಬ್ಬಂದಿ ಸಿದ್ದಿಕ್ ಅಹ್ಮದ್‌, ವಿನೋದ್‌ ರಾಥೋಡ್‌, ಮಲ್ಲಿಕಾರ್ಜುನ್, ನಾಜಿಯಾ ಭಾನು, ಸಂತೋಷ್‌, ಸಮೀರ್, ಶಿವರಾಜಪ್ಪ, ಗೋಪಾಲ್‌, ರವಿಕುಮಾರ್‌, ಕುಮಾರ್‌ ಭಾಗವಹಿಸಿದ್ದರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಎಂ.ಎನ್‌.ಶಶಿಧರ್‌ ಇದ್ದರು.

Join Whatsapp
Exit mobile version