Home ಟಾಪ್ ಸುದ್ದಿಗಳು ಮೈಸೂರು ಶೂಟೌಟ್ ಕಿಂಗ್ ಪಿನ್: ಬಾಂಬೆ ಬುಡ್ಡಾ ಸೆರೆ

ಮೈಸೂರು ಶೂಟೌಟ್ ಕಿಂಗ್ ಪಿನ್: ಬಾಂಬೆ ಬುಡ್ಡಾ ಸೆರೆ

ಮೈಸೂರು: ಅರಮನೆ ನಗರಿಯನ್ನು ಬೆಚ್ಚಿ ಬೀಳಿಸಿದ್ದ ದರೋಡೆ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧ ಪ್ರಮುಖ ಆರೋಪಿ ಬಾಂಬೆ ಬುಡ್ಡಾನನ್ನು ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.


ಸುಮಾರು 60 ವರ್ಷದ ವೃದ್ಧ ಬಾಂಬೆ ಬುಡ್ಡಾನ ಸೆರೆಗಾಗಿ ನಗರ ಪೊಲೀಸರು ಮುಂಬೈನಲ್ಲಿ ಬೀಡುಬಿಟ್ಟು ಖಚಿತವಾದ ಮಾಹಿತಿಯನ್ನು ಆಧರಿಸಿ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಬಾಂಬೆ ಬುಡ್ಡಾ ಸೇರಿ ಕೃತ್ಯದ ಎಲ್ಲಾ ಆರೋಪಿಗಳಿಗೆ ಪೊಲೀಸರು ಹೆಡೆಮುರಿ ಕಟ್ಟಿ ವಿಚಾರಣೆ ಕೈಗೊಂಡಿದ್ದಾರೆ. ಕಳೆದ ಆಗಸ್ಟ್ 23 ರಂದು ವಿದ್ಯಾರಣ್ಯಪುರಂ ನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ನಲ್ಲಿ ದರೋಡೆ ಹಾಗೂ ಶೂಟೌಟ್ ಘಟನೆ ನಡೆದಿತ್ತು. ಡಕಾಯಿತರು ದರೋಡೆ ಮಾಡಿ ಗುಂಡು ಹಾರಿಸಿದ್ದರಿಂದ ದಡದಹಳ್ಳಿ ಚಂದ್ರು ಮೃತಪಟ್ಟಿದ್ದರು.


ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.


ಚಿನ್ನದಂಗಡಿಯಲ್ಲಿ ನಡೆದ ದರೋಡೆ ಶೂಟ್ ಔಟ್ ಪ್ರಕರಣದಲ್ಲಿ 2 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಕಳ್ಳತನವಾಗಿತ್ತು. ದರೋಡೆ ಮಾಡಿದವರಲ್ಲಿ ವೃದ್ಧನ ಪಾತ್ರ ಹಾಗೂ ಚಿನ್ನಾಭರಣದ ಪ್ರಮಾಣ ಸಿಂಹಪಾಲಿದೆ. ಈ 60 ವರ್ಷದ ವೃದ್ಧನ ಬಳಿಯೇ 1 ಕೆ.ಜಿ.ಗೂ ಹೆಚ್ಚು ಚಿನ್ನಾಭರಣವಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. 20 ವರ್ಷದವನಿದ್ದಾಗಿನಿಂದ ಕಳ್ಳತನದಲ್ಲಿ ಪರಿಣತಿ ಹೊಂದಿರುವ ವೃದ್ಧ, ಬಾಂಬೆ ಬುಡ್ಡಾ ಅಂತಲೇ ಕುಖ್ಯಾತಿ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Join Whatsapp
Exit mobile version