ಮೈಸೂರು: ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಅವರು ಕೋಮುಗಲಭೆ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿಗೆ ದೂರು ನೀಡಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಪಕ್ಷದ ಮುಖಂಡರ ನಿಯೋಗವು ಮನವಿ ಪತ್ರ ಸಲ್ಲಿಸಿದೆ.
‘ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಹಾಗೂ ಇರ್ವಿನ್ ರಸ್ತೆಯಲ್ಲಿರುವ ಮಸೀದಿಯನ್ನು ಒಡೆದು ಹಾಕಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸಭೆಯಲ್ಲಿ ಧಮ್ಕಿ ಹಾಕಿದ್ದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲೇ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಮುದಾಯಗಳ ನಡುವೆ ಕಿಚ್ಚು ಹಚ್ಚಿಸುವಂತಹ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಆಗ್ರಹಿಸಿದರು.
‘ಮುಸ್ಲಿಂ ಸಮುದಾಯದ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಯ ತೊಡೆ ನಡುಗುತ್ತದೆಯೇ, ಮಸೀದಿಗಳನ್ನು ಒಡೆದು ಹಾಕದಿದ್ದರೆ ನಾನೇ ನಿಂತು ಒಡೆಯಬೇಕಾಗುತ್ತದೆ ಎಂದು ಹೇಳುವ ಮೂಲಕ ಪ್ರತಾಪಸಿಂಹ ಕಾನೂನನ್ನೇ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ’ ಎಂದು ಆರೋಪಿಸಿದರು.
ಒಂದು ವೇಳೆ ಪ್ರತಾಪ ಸಿಂಹ ವಿರುದ್ಧ ಕಾನೂನು ಕ್ರಮ ಜರುಗಿಸದೇ ಹೋದರೆ ಮುಂದೆ ಕೋಮುಗಲಭೆ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ, ಮಂಜುಳಾ ಮಾನಸ, ವೆಂಕಟೇಶ್, ಮುಖಂಡ ಎಂ.ಕೆ.ಸೋಮಶೇಖರ್ ಇದ್ದರು.