Home ಟಾಪ್ ಸುದ್ದಿಗಳು ಒಂದೇ ವಾರದ ಅಂತರದಲ್ಲಿ ಮೂವರು ಮುಸ್ಲಿಮರ ಥಳಿಸಿ ಹತ್ಯೆ; ಮೂವರ ಮೇಲೆ ಹಲ್ಲೆ

ಒಂದೇ ವಾರದ ಅಂತರದಲ್ಲಿ ಮೂವರು ಮುಸ್ಲಿಮರ ಥಳಿಸಿ ಹತ್ಯೆ; ಮೂವರ ಮೇಲೆ ಹಲ್ಲೆ

ನವದೆಹಲಿ : ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಮೂವರು ಮುಸ್ಲಿಮ್‌ ಯುವಕರನ್ನು ಥಳಿಸಿ ಹತ್ಯೆ ಮಾಡಿರುವ ಮತ್ತು ಮೂವರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿದೆ. ಅಲ್ಲದೆ, ಇನ್ನೊಂದೆಡೆ ಉತ್ತರ ಪ್ರದೇಶದ ರಾಮ್‌ ಸನೇಹಿ ಘಾಟ್‌ ಪ್ರದೇಶದಲ್ಲಿ ಶತಮಾನದಷ್ಟು ಹಳೆಯದಾದ ಮಸೀದಿಯೊಂದು ಆಡಳಿತಾಧಿಕಾರಿಗಳು ಕೆಡವಿದ್ದಾರೆ.

ಹರ್ಯಾಣದ ಮೇವತ್‌ ನಲ್ಲಿ ಮುಸ್ಲಿಮ್‌ ಜಿಮ್‌ ಟ್ರೈನರ್‌ ಆಸಿಫ್‌ ಖಾನ್‌ ಅನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಮೇ 16ರಂದು ಗೂಂಡಗಳ ಪಡೆಯೊಂದು ʼಜೈ ಶ್ರೀರಾಮ್‌ʼ ಘೋಷಣೆ ಕೂಗುವಂತೆ ಒತ್ತಾಯಿಸಿ, ಖಾನ್‌ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದೆ.

ಮೇ 21ರಂದು ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ತರಕಾರಿ ಮಾರಾಟಗಾರ ಯುವಕ ಫೈಸಲ್‌ ಹುಸೇನ್‌ ಎಂಬಾತನನ್ನು ಪೊಲೀಸ್‌ ಸಿಬ್ಬಂದಿ ಥಳಿಸಿ ಹತ್ಯೆ ಮಾಡಿದ್ದಾರೆ.

ಮೇ 22-23ರ ರಾತ್ರಿ ದೆಹಲಿಯ ಸ್ವರೂಪ್‌ ನಗರದಲ್ಲಿ ಗುಂಪೊಂದು ಹದಿಹರೆಯದ ಯುವಕ ಸರ್ಫರಾಝ್‌ ಎಂಬಾತನನ್ನು ಥಳಿಸಿ ಹತ್ಯೆ ಮಾಡಿದೆ.

ಇನ್ನೊಂದೆಡೆ ಹೈದರಾಬಾದ್‌ ವಿಮಾನ ನಿಲ್ದಾಣ ಸಮೀಪದ ಶಂಸಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮುಹಮ್ಮದ್‌ ಸುಭಾನ್‌ ಎಂಬ ಚಾಲಕನಿಗೆ ಟ್ರಾಫಿಕ್‌ ಪೊಲೀಸರು ಕಿರುಕುಳ ನೀಡಿದ್ದಾರೆ.

ಮೇ 16ರಂದು ಉತ್ತರ ಪ್ರದೇಶದ ಮೊರದಾಬಾದ್‌ ಜಿಲ್ಲೆಯಲ್ಲಿ ಸ್ವಯಂ ಘೋಷಿತ ಗೋರಕ್ಷಕ ಗೂಂಡಾ ಪಡೆ ಮುಹಮ್ಮದ್‌ ಶಾಕೀರ್‌ ಎಂಬಾತನ ಮೇಲೆ ಗಂಭೀರ ಹಲ್ಲೆ ಮಾಡಿದೆ.

ಮಧ್ಯಪ್ರದೇಶದ ಜಬಲ್ಪುರದಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಅಂಗಡಿ ಮಾಲಕ ಶೇಖ್‌ ಮುಹಮ್ಮದ್‌ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.

ದೇಶಾದ್ಯಂತ ಕೋವಿಡ್‌ ಸೋಂಕಿನ ಸಂಕಟದ ನಡುವೆಯೂ, ಒಂದೇ ವಾರದ ಅಂತರದಲ್ಲಿ ಮತಾಂಧರು ಮಾತ್ರ ಧರ್ಮದ ಆಧಾರದಲ್ಲಿ ಇಷ್ಟೊಂದು ಮುಸ್ಲಿಮ್‌ ವ್ಯಕ್ತಿಗಳನ್ನು ಥಳಿಸಿ ಹತ್ಯೆ ಮಾಡಿರುವ, ಹಲ್ಲೆ ಮಾಡಿರುವ ಮನಸ್ಥಿತಿ ಅತ್ಯಂತ ಕಳವಳಕಾರಿಯಾದುದು.

Join Whatsapp
Exit mobile version