Home ಟಾಪ್ ಸುದ್ದಿಗಳು ಭಾರತದಲ್ಲಿ ಮುಸ್ಲಿಮರು ಭಯಪಡಬೇಕಾಗಿಲ್ಲ, ಆದರೆ ಮುಸ್ಲಿಮರು ಶ್ರೇಷ್ಠತೆಯ ಬಗ್ಗೆ ಉದ್ರೇಕಕಾರಿ ಭಾಷಣ ನಿಲ್ಲಿಸಲಿ: ಮೋಹನ್ ಭಾಗವತ್

ಭಾರತದಲ್ಲಿ ಮುಸ್ಲಿಮರು ಭಯಪಡಬೇಕಾಗಿಲ್ಲ, ಆದರೆ ಮುಸ್ಲಿಮರು ಶ್ರೇಷ್ಠತೆಯ ಬಗ್ಗೆ ಉದ್ರೇಕಕಾರಿ ಭಾಷಣ ನಿಲ್ಲಿಸಲಿ: ಮೋಹನ್ ಭಾಗವತ್

ನವದೆಹಲಿ: ಭಾರತದಲ್ಲಿ ಮುಸ್ಲಿಮರು ಭಯಪಡಬೇಕಾಗಿಲ್ಲ, ಆದರೆ ಅವರು ತಮ್ಮ “ಉದ್ರೇಕಕಾರಿ ಶ್ರೇಷ್ಠತೆಯ ವಾಕ್ಚಾತುರ್ಯ”ವನ್ನು ತ್ಯಜಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್’ಎಸ್’ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.


ಆರೆಸ್ಸೆಸ್ ನ ಮುಖವಾಣಿ ಪತ್ರಿಕೆಗಳಾದ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಹಿಂದೂ ಎಂಬುದು ನಮ್ಮ ಅಸ್ಮಿತೆ, ನಮ್ಮ ರಾಷ್ಟ್ರೀಯತೆ, ನಮ್ಮ ನಾಗರಿಕತೆಯ ಗುಣ, ಎಲ್ಲರನ್ನೂ ನಮ್ಮವರೆಂದು ಪರಿಗಣಿಸುವ ಒಂದು ಗುಣಲಕ್ಷಣವಾಗಿದೆ. ಅದು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುತ್ತದೆ. ನನ್ನದು ಸತ್ಯ ಮತ್ತು ನಿಮ್ಮದು ಸುಳ್ಳು ಎಂದು ನಾವು ಎಂದಿಗೂ ಹೇಳುವುದಿಲ್ಲ. ನೀವು ನಿಮ್ಮ ಸ್ಥಳದಲ್ಲಿಯೇ ಇದ್ದೀರಿ, ನಾನು ನನ್ನ ಸ್ಥಳದಲ್ಲೇ ಇದ್ದೇನೆ; ಏಕೆ ಹೋರಾಡಬೇಕು, ನಾವು ಒಟ್ಟಿಗೆ ಮುನ್ನಡೆಯೋಣ – ಇದು ಹಿಂದುತ್ವ” ಎಂದು ವಿವರಿಸಿದರು.


“ಸರಳ ಸತ್ಯವೆಂದರೆ ಹಿಂದೂಸ್ಥಾನವು ಹಿಂದೂಸ್ಥಾನವಾಗಿ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ. ಇಸ್ಲಾಂ ಧರ್ಮ ಭಯಪಡಬೇಕಾಗಿಲ್ಲ. ಆದರೆ ಅದೇ ಸಮಯದಲ್ಲಿ, ಮುಸ್ಲಿಮರು ತಮ್ಮ ಸಾರ್ವಭೌಮತ್ವದ ಉದ್ರೇಕಕಾರಿ ವಾಕ್ಚಾತುರ್ಯವನ್ನು ತ್ಯಜಿಸಬೇಕು. ನಾವು ಶ್ರೇಷ್ಠ ಜನಾಂಗಕ್ಕೆ ಸೇರಿದವರು; ನಾವು ಒಮ್ಮೆ ಈ ಭೂಮಿಯನ್ನು ಆಳಿದ್ದೆವು, ಮತ್ತು ಅದನ್ನು ಆಳುತ್ತೇವೆ; ನಮ್ಮ ದಾರಿ ಮಾತ್ರ ಸರಿ, ಉಳಿದದೆಲ್ಲವೂ ತಪ್ಪು; ನಾವು ವಿಭಿನ್ನರಾಗಿದ್ದೇವೆ, ಆದ್ದರಿಂದ ನಾವು ಅದರಲ್ಲಿಯೇ ಮುಂದುವರಿಯುತ್ತೇವೆ; ನಾವು ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲ – ಎಂಬ ಭಾವನೆಯನ್ನು ಕೈಬಿಡಬೇಕು. ವಾಸ್ತವವಾಗಿ, ಇಲ್ಲಿ ವಾಸಿಸುವ ಎಲ್ಲರೂ – ಹಿಂದೂ ಆಗಿರಲಿ ಅಥವಾ ಕಮ್ಯುನಿಸ್ಟರಾಗಿರಲಿ – ಈ ತರ್ಕವನ್ನು ತ್ಯಜಿಸಬೇಕು” ಎಂದು ಅವರು ಹೇಳಿದರು.


ಎಲ್’ಜಿಬಿಟಿ ಸಮುದಾಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಭಾಗವತ್, ಮಾನವರು ಇರುವವರೆಗೂ ಇಂತಹ ವಿಭಿನ್ನತೆಗಳನ್ನು ಹೊಂದಿರುವ ಜನರು ಯಾವಾಗಲೂ ಇರುತ್ತಾರೆ; ಇದು ಜೀವನ ವಿಧಾನವಾಗಿದೆ. ಅವರು ತಮ್ಮದೇ ಆದ ಖಾಸಗಿ ಅವಕಾಶವನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ. ಅವರು ಕೂಡ ಸಮಾಜದ ಭಾಗವಾಗಿದ್ದಾರೆ. ಇದು ತುಂಬಾ ಸರಳವಾದ ಸಮಸ್ಯೆಯಾಗಿದೆ. ನಾವು ಈ ದೃಷ್ಟಿಕೋನವನ್ನು ಪ್ರಚಾರ ಮಾಡಬೇಕಾಗಿದೆ” ಅವರು ಹೇಳಿದರು.


1,000 ವರ್ಷಗಳಿಂದ ಯುದ್ಧದಲ್ಲಿರುವ ಸಮಾಜದಲ್ಲಿನ ಜಾಗೃತಿಯಿಂದಾಗಿ ಪ್ರಪಂಚದಾದ್ಯಂತ ಇರುವ ಹಿಂದೂಗಳಲ್ಲಿ ಹೊಸ ಆಕ್ರಮಣಶೀಲತೆ ಕಂಡು ಬಂದಿದೆ, ಈ ಹೋರಾಟವು ವಿದೇಶಿ ಆಕ್ರಮಣಗಳು, ವಿದೇಶಿ ಪ್ರಭಾವಗಳು ಮತ್ತು ವಿದೇಶಿ ಪಿತೂರಿಗಳ ವಿರುದ್ಧ ನಡೆಯುತ್ತಿದೆ. ಈ ಕಾರಣಕ್ಕೆ ಸಂಘವು ತನ್ನ ಬೆಂಬಲವನ್ನು ನೀಡಿದೆ. ಅದರ ಬಗ್ಗೆ ಮಾತನಾಡಿದವರು ಹಲವರಿದ್ದಾರೆ, ಇವೆಲ್ಲವುಗಳಿಂದಾಗಿ ಹಿಂದೂ ಸಮಾಜವು ಜಾಗೃತಗೊಂಡಿದೆ. ಯುದ್ಧದಲ್ಲಿರುವವರು ಆಕ್ರಮಣಕಾರಿಯಾಗುವುದು ಸಹಜ ಎಂದು ಸಂಘಪರಿವಾರದ ಪುಂಡಾಟವನ್ನು ಭಾಗವತ್ ಸಮರ್ಥಿಸಿಕೊಂಡರು.

Join Whatsapp
Exit mobile version