Home ಟಾಪ್ ಸುದ್ದಿಗಳು ಸ್ಯಾಂಟ್ರೋ ರವಿ ಸಹಿತ ಸಂಬಂಧಪಟ್ಟ ರಾಜಕಾರಣಿಗಳ ಬಂಧನಕ್ಕೆ ಆಗ್ರಹಿಸಿ ಎಎಪಿ ಪ್ರತಿಭಟನೆ

ಸ್ಯಾಂಟ್ರೋ ರವಿ ಸಹಿತ ಸಂಬಂಧಪಟ್ಟ ರಾಜಕಾರಣಿಗಳ ಬಂಧನಕ್ಕೆ ಆಗ್ರಹಿಸಿ ಎಎಪಿ ಪ್ರತಿಭಟನೆ

ಬೆಂಗಳೂರು: ವೇಶ್ಯಾವಟಿಕೆಯ ಮಧ್ಯವರ್ತಿ ಸ್ಯಾಂಟ್ರೋ ರವಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿರುವ ಜನಪ್ರತಿನಿಧಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.


ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, “ರಾಜ್ಯವನ್ನು ಲೂಟಿ ಮಾಡುವ ಉದ್ದೇಶದಿಂದ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ರಚನೆಯಾದ ಅನೈತಿಕ ಸರ್ಕಾರವಿದು. ಬಾಯಿ ತೆರೆದರೆ ಭಾರತೀಯ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿ ನಾಯಕರ ನಿಜ ಬಣ್ಣವು ಸ್ಯಾಂಟ್ರೋ ರವಿ ಪ್ರಕರಣದಿಂದಾಗಿ ಬಟಾ ಬಯಲಾಗಿದೆ. ಮಹಿಳೆಯರ ಬಗ್ಗೆ ಸ್ಪಲ್ಪವೂ ಗೌರವವಿಲ್ಲದ ನಾಯಕರು ಇಂದು ರಾಜ್ಯವನ್ನು ಆಳುತ್ತಿರುವುದು ದುರಂತ” ಎಂದು ಹೇಳಿದರು.


“ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರು ಸ್ಯಾಂಟ್ರೋ ರವಿ ಬಗ್ಗೆ ಗೊತ್ತೇ ಇಲ್ಲವೆಂದು ಮಾಧ್ಯಮಗಳ ಮುಂದೆ ನಾಟಕವಾಡುತ್ತಿದ್ದಾರೆ. ಆದರೆ ಮತ್ತೊಂಡೆದೆ, ಆತನಿಗೆ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಆತನಿಗೆ ನಾಪತ್ತೆಯಾಗಲು ಅವಕಾಶ ನೀಡಿ ಸಾಕ್ಷಿಗಳನ್ನು ನಾಶಪಡಿಸಲಾಗುತ್ತಿದೆ. ಆದ್ದರಿಂದಲೇ ಆತನ ಬಂಧನ ಈವರೆಗೂ ಸಾಧ್ಯವಾಗಿಲ್ಲ. ಕುಮಾರಕೃಪಾ ಅತಿಥಿಗೃಹವು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವು ವಿಪರ್ಯಾಸ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿಯು ಕುಮಾರಕೃಪಾದ ಪ್ರತಿಯೊಂದು ಕೊಠಡಿಗೆ ಭೇಟಿ ನೀಡಿ ಪರಿಶೀಲಿಸುವ ಚಳವಳಿ ಹಮ್ಮಿಕೊಳ್ಳಲಿದೆ” ಎಂದು ಕುಶಲಸ್ವಾಮಿ ಹೇಳಿದರು.


ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಾಧ್ಯಮ ವಕ್ತಾರೆ ಉಷಾ ಮೋಹನ್ ಮಾತನಾಡಿ, “2018ರ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಬಂದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಶಾಸಕರನ್ನು ಖರೀದಿಸಿ ಅಕ್ರಮವಾಗಿ ಅಧಿಕಾರ ಪಡೆಯುವಾಗ ಸ್ಯಾಂಟ್ರೋ ರವಿ ಮೂಲಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುವ ಪಕ್ಷವೆಂದರೆ ಅದು ಬಿಜೆಪಿ. ಮುಂದಿನ ಚುನಾವಣೆಯಲ್ಲಿ ನಾಡಿನ ಸಮಸ್ತ ಮಹಿಳೆಯರು ಬಿಜೆಪಿಯ ವಿರುದ್ಧ ಮತ ಚಲಾಯಸುವ ಮೂಲಕ ತಕ್ಕ ಪಾಠ ಕಲಿಸಬೇಕು” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಹಲವು ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Join Whatsapp
Exit mobile version