Home ಟಾಪ್ ಸುದ್ದಿಗಳು ಬಾಗಲಕೋಟೆಯಲ್ಲಿ ಮತ್ತೆ ಸಂಘಪರಿವಾರದಿಂದ ದಾಂಧಲೆ: ಡಾಬಾಗೆ ನುಗ್ಗಿ ಮುಸ್ಲಿಮರ ಮೇಲೆ ಹಲ್ಲೆ

ಬಾಗಲಕೋಟೆಯಲ್ಲಿ ಮತ್ತೆ ಸಂಘಪರಿವಾರದಿಂದ ದಾಂಧಲೆ: ಡಾಬಾಗೆ ನುಗ್ಗಿ ಮುಸ್ಲಿಮರ ಮೇಲೆ ಹಲ್ಲೆ

ಬಾಗಲಕೋಟೆ: ಕೋಮು ಘರ್ಷಣೆ ನಡೆದು ತಣ್ಣಗಾಗಿದ್ದ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಶುಕ್ರವಾರ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ್ದು, ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ದಾಬಾವೊಂದಕ್ಕೆ ನುಗ್ಗಿದ ಸುಮಾರು 40 ಮಂದಿಯಿದ್ದ ಸಂಘಪರಿವಾರದ ಕಾರ್ಯಕರ್ತರು ಡಾಬಾ ಮಾಲೀಕ ಹಾಗೂ ಕೆಲಸಗಾರರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ.
ಪರಿಣಾಮ ಡಾಬಾದಲ್ಲಿದ್ದ ರಫೀಕ್, ರಾಜಾಸಾಬ್, ದಾವಲ ಮಲಿಕ್, ಹನೀಪ್ ಸಾಬ್, ರೆಹಾನ್ ಅವರು ತೀವ್ರ ಗಾಯಗೊಂಡು ಬಾಗಲಕೋಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲರೂ ಕೆರೂರು ನಿವಾಸಿಗಳು ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ರಾಜಾಸಾಬ್, ಮೊದಲು ನಾಲ್ಕು ಮಂದಿ ಡಾಬಾಗೆ ಬಂದು ಚಹಾ ಕೊಡುವಂತೆ ಕೇಳಿದರು. ಅಷ್ಟರಲ್ಲಿ 20 ಮಂದಿ ಡಾಬಾಗೆ ನುಗ್ಗಿ ದೊಣ್ಣೆ, ತಲವಾರುಗಳಿಂದ ಹಲ್ಲೆ ನಡೆಸಿ ಪರಾರಿಯಾದರು. ಇತ್ತೀಚೆಗೆ ಕೆರೂರಿನಲ್ಲಿ ನಡೆದ ಘಟನೆಗೂ ನಮಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಮುಸ್ಲಿಮರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ತಿಳಿಸಿದರು.


ಸಂದೀಪ್ ಪತ್ತಾರ್, ಅರುಣ್ ಗುಳ್ಯ, ಕಾಂತು ಬಿಜಾಪುರ ಮತ್ತಿತರರು ಈ ತಂಡದಲ್ಲಿದ್ದರು. ಇವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಯಾರೆಲ್ಲಾ ಇದ್ದರು ಎಂಬುದು ಗೊತ್ತಾಗುತ್ತದೆ. ಇವರೆಲ್ಲರೂ ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯವರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಸ್ಥಳಕ್ಕೆ ಬಾದಾಮಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.


ಎರಡು ದಿನಗಳ ಹಿಂದೆಯಷ್ಟೇ ಕೆರೂರು ಪಟ್ಟಣದಲ್ಲಿ ಇಬ್ಬರು ಯುವಕರಿಗೆ ಚೂರಿ ಇರಿತವಾಗಿತ್ತು. ಇದಾದ ಬೆನ್ನಲ್ಲೇ ಮುಸ್ಲಿಮರ ಅಂಗಡಿ, ಮನೆಗಳಿಗೆ ನುಗ್ಗಿದ ದುಷ್ಕರ್ಮಿಗಳು ನುಗ್ಗಿ ದಾಂಧಲೆವೆಬ್ಬಿಸಿದ್ದರು.

Join Whatsapp
Exit mobile version