Home ಟಾಪ್ ಸುದ್ದಿಗಳು ಮುಸ್ಲಿಮ್ ಜವಳಿ ವ್ಯಾಪಾರಿಗಳಿಗೆ ಮಾರಣಾಂತಿಕ ಹಲ್ಲೆ: ಇದು ಯುಪಿಯ ಗೂಂಡಾ ಮಾಡಲ್ ಎಂದ SDPI

ಮುಸ್ಲಿಮ್ ಜವಳಿ ವ್ಯಾಪಾರಿಗಳಿಗೆ ಮಾರಣಾಂತಿಕ ಹಲ್ಲೆ: ಇದು ಯುಪಿಯ ಗೂಂಡಾ ಮಾಡಲ್ ಎಂದ SDPI

ಪುತ್ತೂರು: ಕಡಬದ ಕಾಣಿಯೂರು ಎಂಬಲ್ಲಿ ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ಮುಸ್ಲಿಮ್ ಜವಳಿ ವ್ಯಾಪಾರಿಗಳನ್ನು SDPI ನಿಯೋಗ ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ  SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಇಬ್ಬರು ಮುಸ್ಲಿಮ್ ಜವಳಿ ವ್ಯಾಪಾರಿಗಳಿಗೆ 50 ಮಂದಿಯ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಮೈಯ್ಯಲ್ಲೆಲ್ಲಾ ಬಾಸುಂಡೆ ಬರುವಂತೆ ಅಮಾನುಷವಾಗಿ ಇಬ್ಬರನ್ನೂ ಕಿಡಿಗೇಡಿಗಳು ಥಳಿಸಿದ್ದು, ಮಾತ್ರವಲ್ಲದೆ ಅವರ ಮೇಲೆ ಬೈಕ್ ಹರಿಸಿ ವಿಕೃತಿ ಮೆರೆದಿದ್ದಾರೆ. ಇಂತಹ ಅಮಾನವೀಯ ಘಟನೆ ಈ ಹಿಂದೆ ಉತ್ತರ ಪ್ರದೇಶದಲ್ಲಿ ವರದಿಯಾಗುತ್ತಿತ್ತು, ಆದರೆ ಇದೀಗ ಯುಪಿ ಮಾಡೆಲ್ ಗೂಂಡಾ ವರ್ತನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆದಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿದಿನ ಅದೇ ಲೈನ್ ನಲ್ಲಿ ಜವಳಿ ವ್ಯಾಪಾರ ಮಾಡುವ, ಪರಿಚಿತರೂ ಆಗಿರುವ ಇಬ್ಬರು ವ್ಯಾಪಾರಿಗಳನ್ನು ಈ ರೀತಿ ಅಮಾನುಷವಾಗಿ ಥಳಿಸಿದ್ದು ಯಾರ ಪ್ರಚೋದನೆಯಿಂದ? ಇದಕ್ಕೆಲ್ಲಾ ಕುಮ್ಮಕ್ಕು ನೀಡುವವರು ಯಾರು ಎಂದು ಇಲ್ಯಾಸ್ ತುಂಬೆ ಪ್ರಶ್ನಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ದುಷ್ಕರ್ಮಿಗಳ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇಬ್ಬರು ಜವಳಿ ವ್ಯಾಪಾರಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 144, 341, 504, 323, 324, 427, ಜೊತೆಗೆ 149 ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version