ಪಾಟ್ನಾ: ಬಿಹಾರದಲ್ಲಿ ಮುಸ್ಲಿಮ್ ಯುವಕನನ್ನು ಸಂಘಪರಿವಾರದ ಕಾರ್ಯಕರ್ತರು ಗೋರಕ್ಷಣೆಯ ನೆಪದಲ್ಲಿ ಅಮಾನವೀಯ ರೀತಿಯಲ್ಲಿ ಕಿರುಕುಳ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತನನ್ನು ಹೊಡೆದು ಕೊಂದ ನಂತರ ಶವವನ್ನು ನಾಲೆಯಲ್ಲಿ ಹೂಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದಾಳಿಕೋರರು ಮುಸ್ಲಿಮ್ ವ್ಯಕ್ತಿಯನ್ನು ಕೊಂದ ನಂತರ ಆತನ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ಈ ಬಳಿಕ ಅವನ ದೇಹಕ್ಕೆ ಉಪ್ಪನ್ನು ಹಾಕಿ, ವೇಗವಾಗಿ ಕೊಳೆಯುವಂತೆ ಹೂತು ಹಾಕಿದ್ದರು ಎಂದು ವರದಿಗಳು ತಿಳಿಸಿವೆ.
ಸದ್ಯ ವೀಡಿಯೋದಲ್ಲಿ ಸಮಸ್ತಿಪುರ ಜಿಲ್ಲೆಯ ಜನತಾ ದಳ (ಯುನೈಟೆಡ್) ಪಕ್ಷದ ಸದಸ್ಯ ಮುಹಮ್ಮದ್ ಖಲೀಲ್ ಆಲಂ ಎಂಬಾತ ತನ್ನನ್ನು ಉಳಿಸುವಂತೆ ಕೈಜೋಡಿಸಿ ದಾಳಿಕೋರರಲ್ಲಿ ಬೇಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ದಾಳಿಕೋರ ಸಂಘಪರಿವಾರದ ಕಾರ್ಯಕರ್ತರ ಮುಖ ವೀಡಿಯೋದಲ್ಲಿ ಕಾಣಿಸುವುದಿಲ್ಲ. ಗೋಹತ್ಯೆ ಮಾಡುವ ಸ್ಥಳಗಳನ್ನು ತಿಳಿಸುವಂತೆ ಮತ್ತು ಗೋಮಾಂಸ ಮಾರಾಟದಲ್ಲಿ ತೊಡಗಿಸಿಕೊಂಡವವರ ತೋರಿಸುವಂತೆ ಒತ್ತಾಯಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಈ ಸಂದರ್ಭದಲ್ಲಿ ದಾಳಿಕೋರ ಸಂಘಪರಿವಾರದ ಕಾರ್ಯಕರ್ತ ಮುಹಮ್ಮದ್ ಖಲೀಲ್ ಬಳಿ ಪ್ರಶ್ನಿಸುತ್ತಾ, ತನ್ನ ಜೀವನದಲ್ಲಿ ಎಷ್ಟು ಸಲ ಗೋಮಾಂಸ ಸೇವಿಸಿರುವೆ ಮತ್ತು ಮಕ್ಕಳಿಗೆ ಸೇವಿಸುವಂತೆ ಮಾಡಿರುವೆ ಎಂದು ಪ್ರಶ್ನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಸಂಘಪರಿವಾರದ ಈ ಹ್ಯೇಯ ಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೊಲೆಗೆ ಕೋಮು ಬಣ್ಣ ನೀಡಲು ಹಾಗೂ ಗಮನ ಬೇರೆಡೆ ಸೆಳೆಯಲು ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.