Home ಟಾಪ್ ಸುದ್ದಿಗಳು ‘ಅಸ್ಸಾಂ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಹಿಟ್ಲರ್ ನನ್ನು ನೆನಪಿಸುತ್ತದೆ’ : ಮುಸ್ಲಿಮ್ ಲೀಗ್

‘ಅಸ್ಸಾಂ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಹಿಟ್ಲರ್ ನನ್ನು ನೆನಪಿಸುತ್ತದೆ’ : ಮುಸ್ಲಿಮ್ ಲೀಗ್

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಸೌಲಭ್ಯ ನಿರಾಕರಿಸಿದ್ದ ಹಿಮಂತ್ ಬಿಸ್ವಾ ಸರ್ಕಾರ

ಗುವಾಹಟಿ: ಅಸ್ಸಾಂ ನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳ ನಿರಾಕರಣೆಯನ್ನು ಮುಸ್ಲಿಂ ಲೀಗ್ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮುಸ್ಲಿಂ ಲೀಗ್ ಮುಖಂಡ ಪ್ರೊ. ಕೆ.ಎಂ. ಖಾದಿರ್ ಮೊಯೀನ್, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಅವರ ಜನಸಂಖ್ಯಾ, ಮಹಿಳಾ ಸಬಲೀಕರಣ ನೀತಿ ಹಿಟ್ಲರ್ ನನ್ನು ನೆನಪಿಸುತ್ತದೆ ಎಂದು ಆರೋಪಿಸಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸೌಲಭ್ಯಗಳು ಮತ್ತು ಹಕ್ಕುಗಳನ್ನು ನಿರಾಕರಿಸುವುದು ಅಸಂವಿಧಾನಿಕ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಕಲ್ಯಾಣ ಯೋಜನೆಯ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಈ ಹಿಂದೆ ಘೋಷಿಸಿದ್ದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೂ ನಿಷೇಧವಿದ್ದು, ಈ ಕಾಯ್ದೆಯು ರಾಜ್ಯದ ಮುಸ್ಲಿಂ ಸಮುದಾಯಕ್ಕೆ ಹೆಚ್ಚು  ಹಾನಿಕಾರಕವಾಗಿದೆ. ಇದೇ ವೇಳೆ ಈ ಕಾಯ್ದೆಯಲ್ಲಿ ಚಹಾ ಕಂಪನಿ ಕಾರ್ಮಿಕರು, ಬುಡಕಟ್ಟು ಜನರು ಮತ್ತಿತರರಿಗೆ ವಿನಾಯಿತಿ ನೀಡಲಾಗಿದ್ದು, ಅವರು ನಾಲ್ಕು ಅಥವಾ ಐದು ಮಕ್ಕಳನ್ನು ಹೊಂದಬಹುದು.

ಅಸ್ಸಾಂನಲ್ಲಿ ಜಾರಿಗೆ ತರಲಾಗುವುದು ಎಂದು ಘೋಷಿಸಲಾದ ಈ ಕಾಯ್ದೆಯು ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಖಾದಿರ್ ಮೊಯೀನ್ ಹೇಳಿದರು. ದೇಶದ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Join Whatsapp
Exit mobile version