Home ಕರಾವಳಿ ಸಚಿವ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್ ಗೆ ಮುನೀರ್ ಕಾಟಿಪಳ್ಳ ಎಚ್ಚರಿಕೆ

ಸಚಿವ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್ ಗೆ ಮುನೀರ್ ಕಾಟಿಪಳ್ಳ ಎಚ್ಚರಿಕೆ

ಮಂಗಳೂರು: ನೀಡಿದ್ದ ಭರವಸೆ ಈಡೇರಿಸದ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪತ್ರ ಬರೆದು ಉಭಯ ನಾಯಕರು ಈ ಹಿಂದೆ ನೀಡಿದ್ದ ಭರವಸೆಯನ್ನು ನೆನಪಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನಾಳೆ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಗೆ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನೀರ್ ಈ ಪತ್ರ ಬರೆದಿದ್ದಾರೆ.

“ನೀವು ದೆಹಲಿಯಲ್ಲಿ ಜಂಟಿ ಹೇಳಿಕೆ ನೀಡಿ ಭರ್ತಿಎರಡು ವರ್ಷ ಆಯಿತು. ಅದರ ಪತ್ರಿಕಾ ವರದಿ ಇಲ್ಲಿದೆ. ಸುರತ್ಕಲ್ ಟೋಲ್ ಗೇಟ್ ರದ್ದೂ ಆಗಲಿಲ್ಲ, ಆ ಕುರಿತು ವಿಶೇಷ ಸಭೆಯೂ ನಡೆಯಲಿಲ್ಲ. ಬದಲಿಗೆ ಟೋಲ್ ದರ ದುಪ್ಪಟ್ಟಾಯ್ತು. ಬಸ್ಸು, ಲಾರಿಗಳ ರಿಯಾಯತಿ ಕಡಿತ ಆಯ್ತು. “ಟೋಲ್ ಗೇಟ್ ಅಧಿಕೃತ, ತಕರಾರು ತೆಗೆದರೆ ಹುಷಾರ್” ಎಂಬ ಬೆದರಿಕೆ ಪ್ಲೆಕ್ಸ್ ಬೇರೆ ಪ್ರತ್ಯಕ್ಷ ಆಗಿದೆ.

ಈಗ ಸ್ವತಃ ನಿತಿನ್ ಗಡ್ಕರಿ ಸಾಹೇಬರು ಮಂಗಳೂರಿಗೆ (ಫೆಬ್ರವರಿ 28) ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಾದರೂ ನೀವು ನೀಡಿದ ಭರವಸೆಯಂತೆ ವಿಶೇಷ ಸಭೆ ನಡೆಸಿ ಸುರತ್ಕಲ್ ಟೋಲ್ ಗೇಟ್ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಿ. ಇಲ್ಲದಿದ್ದಲ್ಲಿ ಜನತೆ ನಿಮ್ಮನ್ನು ಸುಳ್ಳರು, ವಂಚಕರು, ಮೋಸಗಾರರು ಎಂದು ನಿರ್ಧರಿಸುತ್ತಾರೆ. ಹೋರಾಟ ತೀವ್ರವಾಗುತ್ತದೆ. ನಿತಿನ್ ಗಡ್ಕರಿಯವರಿಗೆ ಅವರ ಮಾತನ್ನು ನೆನಪಿಸಿ ಸಭೆಯ ಏರ್ಪಾಡು ಮಾಡುವುದು ಮಾನ್ಯ ನಳಿನ್ ಕುಮಾರ್ ಕಟೀಲ್ ರ ಜವಾಬ್ದಾರಿ. ಅದನ್ನು ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ರಿಗೆ ನೆನಪಿಸುತ್ತಿದ್ದೇವೆ. ನೀವೂ ನೆನಪಿಸಿ. ಧ್ವನಿ ಎತ್ತಿ ಎಂದು ಪತ್ರದಲ್ಲಿ ಮುನೀರ್ ತಿಳಿಸಿದ್ದಾರೆ.

Join Whatsapp
Exit mobile version