ಮುಂಬೈ: ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾದ ಪ್ರಕರಣದ ಸಂಬಂಧ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವ ಆರೋಪದ ಮೇಲೆ ಸಹ ನಟನನ್ನು ಬಂಧಿಸಲಾಗಿದೆ.
ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಶನಿವಾರ ಶೂಟಿಂಗ್ ಸೆಟ್‌ನಲ್ಲಿಯೇ ಕಿರುತೆರೆ ನಟಿ ತುನೀಶಾ ಶರ್ಮಾ(20) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸಲಾಗಿದೆ.
ತುನೀಶಾ ತಾಯಿ ಶೀಜಾನ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಸೋಮವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆತ್ಮಹತ್ಯೆಗೆ ಶರಣಾದ ನಟಿಯ ಮರಣೋತ್ತರ ಪರೀಕ್ಷೆ ಇಂದು ಮುಂಜಾನೆ ನೈಗಾಂವ್‌ನ ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ನಟಿ ಶೂಟಿಂಗ್ ಸೆಟ್‌ನಲ್ಲಿ ಚಹಾದ ವಿರಾಮದ ಬಳಿಕ ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತುನೀಶಾ ಶರ್ಮಾ ಶವ ಪತ್ತೆಯಾಗಿತ್ತು. ಆಕೆ ಎಷ್ಟು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆ ಸೆಟ್‌ನಲ್ಲಿದ್ದವರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಬಳಿಕ ಅವರನ್ನು ಮಧ್ಯರಾತ್ರಿ 1:30ರ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ತುನಿಶಾ ಶರ್ಮಾ ಅವರ ಸಹೋದ್ಯೋಗಿಗಳು ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ. ಆದರೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದಿದ್ದಾರೆ. ಆಕೆಯ ಸಾವನ್ನು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುನಿಶಾ ಶರ್ಮಾ ‘ಭಾರತ್ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್’ ಧಾರವಾಹಿಯಲ್ಲಿ ಬಾಲ ನಟಿಯಾಗಿ ಚಂದ್ ಕನ್ವರ್ ಪಾತ್ರವನ್ನು ನಿರ್ವಹಿಸುವ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಅಂದಿನಿಂದ ಅವರು ಹಲವು ಶೋಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಇಷ್ಕ್ ಸುಭಾನ್ ಅಲ್ಲಾ’, ‘ಗಬ್ಬರ್ ಪೂಚ್‌ವಾಲಾ’, ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್’ ಹಾಗೂ ‘ಚಕ್ರವರ್ತಿ ಅಶೋಕ ಸಾಮ್ರಾಟ್’ ಶೋಗಳಲ್ಲೂ ಕೆಲಸ ಮಾಡಿದ್ದಾರೆ.