Home ಟಾಪ್ ಸುದ್ದಿಗಳು ಅಂಬಾನಿ ಕುಟುಂಬದಿಂದ ನಡೆದ ಅಪಘಾತ: ಮುಂಬೈ ಪೊಲೀಸರ ನಡೆ ಸಂಶಯಾಸ್ಪದ

ಅಂಬಾನಿ ಕುಟುಂಬದಿಂದ ನಡೆದ ಅಪಘಾತ: ಮುಂಬೈ ಪೊಲೀಸರ ನಡೆ ಸಂಶಯಾಸ್ಪದ

ಮಿತಿಮೀರಿದ ವೇಗದಿಂದಾಗಿ ಸೀ ಲಿಂಕ್’ನಲ್ಲಿ ಅಪಘಾತ

ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರಿಗೆ ಸೇರಿದ ಐಷಾರಾಮಿ ಫೆರಾರಿ SF90 ಕಾರು ಮುಂಬೈನ ಬಾಂದ್ರಾ ವರ್ಲಿ ಸಮುದ್ರ ಮಾರ್ಗದಲ್ಲಿ ಅಪಘಾತಕ್ಕೀಡಾಗಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಜ್ಜುಗುಜ್ಜಾಗಿದೆ.

ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಫೆರಾರಿ ಕಾರು ಅತಿ ವೇಗದಲ್ಲಿ ವರ್ಲಿ ಕಡೆಗೆ ಚಲಿಸುತ್ತಿತ್ತು. ಕಾರು ನಿಯಂತ್ರಣ ಕಳೆದುಕೊಂಡು ಸಮುದ್ರ ಕೊಂಡಿಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಾರಿನಲ್ಲಿ ಮುಖೇಶ್ ಅಂಬಾನಿ ಅವರ ಸೊಸೆ ಇದ್ದರು ಎನ್ನಲಾಗುತ್ತಿದೆ.

ಐಷಾರಾಮಿ ಕಾರಿನ ಜೊತೆಗೆ ಬರುತ್ತಿದ್ದ ಬೆಂಗಾವಲು ಕಾರಿನಲ್ಲಿದ್ದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾದರು. ಬದುಕುಳಿದವರನ್ನು ಕಾರಿನಿಂದ ಹೊರತೆಗೆದು ಬೇರೆ ಕಾರಿನಲ್ಲಿ ಕರೆದೊಯ್ದರು. ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಾನಿಗೊಳಗಾದ ವಾಹನವನ್ನು ಸ್ಥಳಾಂತರಿಸಿದ್ದಾರೆ.

ಬಾಂದ್ರಾ ಪೊಲೀಸ್ ಠಾಣೆಯ ಪೊಲೀಸರು ಅಪಘಾತವನ್ನು ದೃಢಪಡಿಸಿದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಕುತೂಹಲಕಾರಿ ವಿಷಯವೇನೆಂದರೆ ಅಪಘಾತದ ಸ್ಥಳಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಯ ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿದ್ದು, ಘಟನೆ ನಡೆದ ಬಳಿಕ ಅವರನ್ನು ಮೂರು ದಿನಗಳ ರಜೆಯ ಮೇಲೆ ಕಳುಹಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿವೆ.

ಅಂಬಾನಿ ಸೊಸೆಯರ ಪೈಕಿ ಒಬ್ಬರು ವಾಹನದೊಳಗೆ ಇದ್ದರೆಂಬ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮನೆಯಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ ಅವರ ಸೊಸೆ, ಶ್ಲೋಕಾ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪಾಲ್ಗೊಂಡಿದ್ದರು ಎಂಬ ಮಾಹಿತಿ ಇದೆ. ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುವಾಗ ಒಬ್ಬರು ಈ ಕಾರಿನಲ್ಲಿ ತೆರಳಿದ್ದರು ಎನ್ನಲಾಗುತ್ತಿದೆ.

ಅಪಘಾತಕ್ಕೀಡಾದ ಐಷಾರಾಮಿ ಫೆರಾರಿ SF90 ಕಾರಿನ ಮೂಲ ಬೆಲೆ 8 ಕೋಟಿ ರೂಪಾಯಿಯಾಗಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

https://twitter.com/SabSeTezz1/status/1584109551783010304
Join Whatsapp
Exit mobile version