ನವದೆಹಲಿ: ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್-10 ಪಟ್ಟಿಯಿಂದ ಮುಕೇಶ್ ಅಂಬಾನಿ ಅವರು ಹೊರಬಿದ್ದಿದ್ದಾರೆ.
ಅಂಬಾನಿ ಅವರ ಸಾಲದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ನಿವ್ವಳ ಆಸ್ತಿ ಮೌಲ್ಯ ಇಳಿಕೆ ಆಗುತ್ತಿದೆ. 2024ರ ಹುರೂನ್ ಪಟ್ಟಿಗೆ ಹೋಲಿಸಿದರೆ ಒಂದು ವರ್ಷದಲ್ಲಿ ಅಂಬಾನಿ ಆಸ್ತಿ ಮೌಲ್ಯ ಒಂದು ಲಕ್ಷ ಕೋಟಿ ರೂನಷ್ಟು ಕಡಿಮೆ ಆಗಿದೆ. 2025ರಲ್ಲಿ ಅವರ ಸಂಪತ್ತು 8.6 ಲಕ್ಷ ಕೋಟಿ ರೂನಷ್ಟಿದೆ. ಇಷ್ಟಾದರೂ ಮುಕೇಶ್ ಅಂಬಾನಿ ಭಾರತದ ನಂಬರ್ ಒನ್ ಶ್ರೀಮಂತ ಎನ್ನುವ ಹಣೆಪಟ್ಟಿ ಮುಂದುವರಿಸಿದ್ದಾರೆ. ಭಾರತ ಮಾತ್ರವಲ್ಲ, ಏಷ್ಯಾದಲ್ಲೂ ಅವರೇ ನಂಬರ್ ಒನ್ ಶ್ರೀಮಂತ.
ಎಕ್ಸ್, ಟೆಸ್ಲಾ, ಸ್ಪೇಸ್ ಎಕ್ಸ್ ಇತ್ಯಾದಿ ಸಂಸ್ಥೆಗಳ ಮುಖ್ಯಸ್ಥ ಇಲಾನ್ ಮಸ್ಕ್ ಅವರ ನಂಬರ್ ಒನ್ ಶ್ರೀಮಂತನೆಂಬ ಪಟ್ಟ ಅಬಾಧಿತವಾಗಿ ಮುಂದುವರಿಯುತ್ತಿದೆ. ಒಂದು ವರ್ಷದಲ್ಲಿ ಅವರ ಆಸ್ತಿ ಶೇ. 82ರಷ್ಟು ಹೆಚ್ಚಳವಾಗಿದೆ. ಈಗ ಅವರು 420 ಬಿಲಿಯನ್ ಡಾಲರ್ನಷ್ಟು ಆಸ್ತಿ ಹೊಂದಿರುವ ಕುಬೇರನಾಗಿದ್ದಾರೆ.
ಒಂದೆಡೆ ಅಂಬಾನಿ ಶ್ರೀಮಂತಿಕೆ ಕಡಿಮೆ ಆಗುತ್ತಿದ್ದರೆ, ಇನ್ನೊಂದೆಡೆ ಅದಾನಿ ಶ್ರೀಮಂತಿಕೆ ಹೆಚ್ಚಿದೆ. ಅಂಬಾನಿ ಒಂದು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ ಕಳೆದುಕೊಂಡರೆ, ಅದಾನಿಯವರು ಅದೇ ಅವಧಿಯಲ್ಲಿ ಅಷ್ಟೇ ಪ್ರಮಾಣದಲ್ಲಿ ಗಳಿಕೆ ಕಂಡಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 8.4 ಲಕ್ಷ ಕೋಟಿ ರೂನಷ್ಟಿದೆ. ಅಂಬಾನಿಗೂ ಅದಾನಿಗೂ ಸಂಪತ್ತಿನಲ್ಲಿ ಕೂದಲೆಳೆಯ ಅಂತರ ಇದೆಯಷ್ಟೇ. ಈ ಟ್ರೆಂಡ್ ಹೀಗೆಯೇ ಮುಂದುವರಿದರೆ 2022ರಲ್ಲಾದಂತೆ ಅಂಬಾನಿಯನ್ನು ಅದಾನಿ ಹಿಂದಿಕ್ಕುವ ಸಾಧ್ಯತೆ ಎದ್ದು ಕಾಣುತ್ತಿದೆ.
ಹುರೂನ್ ಪಟ್ಟಿ: ಭಾರತದ ಟಾಪ್-10 ಶ್ರೀಮಂತರು
- ಮುಕೇಶ್ ಅಂಬಾನಿ ಮತ್ತು ಕುಟುಂಬ: 8.6 ಲಕ್ಷ ಕೋಟಿ ರೂ
- ಗೌತಮ್ ಅದಾನಿ ಮತ್ತು ಕುಟುಂಬ: 8.4 ಲಕ್ಷ ಕೋಟಿ ರೂ
- ರೋಷನಿ ನಾದರ್ ಮತ್ತು ಕುಟುಂಬ: 3.5 ಲಕ್ಷ ಕೋಟಿ ರೂ
- ದಿಲೀಪ್ ಸಾಂಘವಿ ಮತ್ತು ಕುಟುಂಬ: 2.5 ಲಕ್ಷ ಕೋಟಿ ರೂ
- ಅಜೀಂ ಪ್ರೇಮ್ಜಿ ಮತ್ತು ಕುಟುಂಬ: 2.2 ಲಕ್ಷ ಕೋಟಿ ರೂ
- ಕುಮಾರಮಂಗಲಂ ಬಿರ್ಲಾ ಮತ್ತು ಕುಟುಂಬ: 2 ಲಕ್ಷ ಕೋಟಿ ರೂ
- ಸೈರಸ್ ಪೂನಾವಾಲಾ ಮತ್ತು ಕುಟುಂಬ: 2 ಲಕ್ಷ ಕೋಟಿ ರೂ
- ನೀರಜ್ ಬಜಾಜ್ ಮತ್ತು ಕುಟುಂಬ: 1.6 ಲಕ್ಷ ಕೋಟಿ ರೂ
- ರವಿ ಜೈಪುರಿಯಾ ಮತ್ತು ಕುಟುಂಬ: 1.4 ಲಕ್ಷ ಕೋಟಿ ರೂ
- ರಾಧಾಕೃಷ್ಣ ದಮಾನಿ ಮತ್ತು ಕುಟುಂಬ: 1.4 ಲಕ್ಷ ಕೋಟಿ ರೂ.