ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಉಂಟಾದ ಸಂದರ್ಭದಲ್ಲಿ ಮುಹಮ್ಮದ್ ಮಾಣಿಕ್ ತನ್ನ ಸಮಯ ಪ್ರಜ್ಞೆಯಿಂದ 10 ಹಿಂದೂಗಳ ಜೀವವನ್ನು ಉಳಿಸಿ ಭಾರಿ ಪ್ರಶಂಸೆಗೆ ಅರ್ಹರಾಗಿದ್ದಾರೆ.
ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾದ ಪರಿಣಾಮ ಏಳು ಮಂದಿ ಮೃತಪಟ್ಟು ಹಲವರು ಕಣ್ಮರೆಯಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಜಲ್ಪೈಗುರಿ ಜಿಲ್ಲೆಯ ನಿಯೋರಾ ನದಿ ದಂಡೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆಯನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಈ ವೇಳೆ ಏಕಾಏಕಿ ನೀರು ನುಗ್ಗಿದೆ. ಆ ಸಮಯದಲ್ಲಿ ಮುಹಮ್ಮದ್ ಮಾಣಿಕ್ ತಮ್ಮ ಜೀವವನ್ನು ಪಣಕ್ಕಿಟ್ಟು 15 ಅಡಿ ಎತ್ತರದಿಂದ ನದಿಗೆ ಹಾರುವ ಮೂಲಕ 10 ಜನರ ಜೀವವನ್ನು ಉಳಿಸಿದ್ದಾರೆ.
“ನಾನು ಅಲ್ಲಾಹನ ನಾಮದೊಂದಿಗೆ ನದಿಗೆ ಹಾರಿದೆ. ದೇವರು ಇದ್ದಾನೆ ಎಂಬ ದೃಢ ನಂಬಿಕೆ ಇತ್ತು. ಮತ್ತು ನನಗೆ ಈಜುವುದು ಹೇಗೆಂದು ತಿಳಿದಿದೆ” ಎಂದು ಮಾಣಿಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನೀರಿನಲ್ಲಿ ತೇಲುತ್ತಿದ್ದ ಜನರನ್ನು ರಕ್ಷಿಸುವ ಭರದಲ್ಲಿ ಮಾಣಿಕ್ ಅವರೂ ಗಾಯಗೊಂಡಿದ್ದರಿಂದ, ಅವರನ್ನು ರಾತ್ರಿ ಮಾಲ್ ಬಜಾರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದಾರೆ.