ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ, ಐಪಿಎಲ್‌ನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆರ್‌ಸಿಬಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ವಿರುದ್ದ ಬುಧವಾರ ಕಣಕ್ಕಿಳಿಯುವ ಮೂಲಕ ಧೋನಿ, ಚೆನ್ನೈ ಪರ 200ನೇ ಪಂದ್ಯವನ್ನಾಡಿದರು. ಆ ಮೂಲಕ . ಐಪಿಎಲ್‌ನಲ್ಲಿ ಒಂದು ತಂಡದ ಪರ 200 ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ 2ನೇ ಆಟಗಾರ ಎನ್ನುವ ಕೀರ್ತಿಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ.
ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿಆರ್‌ಸಿಬಿ ಪರ ಇದುವರೆಗೂ ಒಟ್ಟು 218 ಪಂದ್ಯಗಳನ್ನಾಡಿದ್ದಾರೆ. ಮುಂಬೈ ಪರ 187 ಪಂದ್ಯಗಳನ್ನಾಡಿರುವ ಕೀರನ್ ಪೊಲಾರ್ಡ್ 3ನೇ ಸ್ಥಾನದಲ್ಲಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾದ ವರ್ಷದಿಂದ ಧೋನಿ ಒಟ್ಟು 230 ಪಂದ್ಯಗಳನ್ನಾಡಿದ್ದು, ಇದರಲ್ಲಿ 30 ಪಂದ್ಯಗಳನ್ನು ಪುಣೆ ಸೂಪರ್ ಜೈಂಟ್ ಪರ ಆಡಿದ್ದಾರೆ. ಉಳಿದ ಪಂದ್ಯಗಳಲ್ಲಿ ಯೆಲ್ಲೋ ಜೆರ್ಸಿ ಧರಿಸಿ ಮೈದಾನಕ್ಕಿಳಿದಿದ್ದಾರೆ. ಎಲ್ಲಾ ಆವೃತ್ತಿಗಳಲ್ಲೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಧೋನಿ, ಈ ಬಾರಿ ಆರಂಭದಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದರೂ, ತಂಡ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದಾರೆ.
ಸ್ಮರಣೀಯವಾಗದ 200ನೇ ಪಂದ್ಯ !
ಐಪಿಎಲ್ ವೃತ್ತಿ ಜೀವನದ ಮಹತ್ವದ ಪಂದ್ಯದಲ್ಲಿ ಧೋನಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಸಿಎಸ್‌ಕೆ ಪರ 200ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 13 ರನ್‌ಗಳ ಅಂತರದಲ್ಲಿ ತಂಡ ಸೋಲು ಕಂಡಿದೆ. ವೈಯಕ್ತಿಕವಾಗಿ ಧೋನಿ ಕೇವಲ 2 ರನ್‌ಗಳಿಸಲಷ್ಟೇ ಶಕ್ತರಾದರು.