ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ, ಸಮಾಜಸೇವಕಿ ಹೇಮಾವತಿ ವಿ ಹೆಗ್ಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾವಿದ ದೇವದಾಸ್ ಕಾಪಿಕಾಡ್ ಅವರು ಮಂಗಳೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಗ್ಗೆ ವಿ.ವಿ.ಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಎ.23ರಂದು ನಡೆಯುವ ಮಂಗಳೂರು ವಿಶ್ವ ವಿದ್ಯಾಲಯದ 40ನೆ ಘಟಿಕೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ, ಸಮಾಜಸೇವಕಿ ಹೇಮಾವತಿ ವಿ ಹೆಗ್ಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇವರೊಂದಿಗೆ ಡಾ.ಶಿವಾನಂದ ನಾಯ್ಕ್ ಅವರಿಗೆ ವಿಜ್ಞಾನ (ಸಂಶೋಧನೆಗೆ) ಡಾಕ್ಟರೇಟ್ ಪುರಸ್ಕಾರ ನೀಡಲಾಗುತ್ತಿದೆ.
ಘಟಿಕೋತ್ಸವದಲ್ಲಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಹ ಕುಲಾಧಿಪತಿ ಡಾ. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 153 ಮಂದಿಗೆ ಪಿಎಚ್ ಡಿ ಪದವಿ, 52 ಮಂದಿಗೆ ಚಿನ್ನದ ಪದಕ, 192 ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.